ಬೆಂಗಳೂರು: ರಾಜ್ಯದ 5 ನಗರಸಭೆ ಸೇರಿದಂತೆ ಅವಧಿ ಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳು ಮತ್ತು 57 ಗ್ರಾಮಪಂಚಾಯಿತಿಗಳ ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ.
ಆಯಾ ನಗರ ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ತುಮಕೂರು, ಚಿಕ್ಕಮಗಳೂರು, ಶಿರಾ, ಗದಗ-ಬೆಟಗೇರಿ, ಹೆಬ್ಬಗೋಡಿ, ಹೊಸಪೇಟೆ ನಗರಸಭೆ ಹಾಗೂ 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳಿಗೆ ನಡೆದ ಮತದಾನದ ಮತ ಎಣಿಕೆ ಕಾರ್ಯ ನಡೆಯಲಿದೆ. ಇದರೊಂದಿಗೆ 1185 ವಾರ್ಡ್ ಗಳ ಗ್ರಾಪಂ ಚುನಾವಣೆ ಫಲಿತಾಂಶ ಕೂಡ ಪ್ರಕಟವಾಗಲಿದೆ.
ಕೆಳಹಂತದಿಂದ ಪಕ್ಷ ಸಂಘಟನೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಮುಖವಾಗಿರುವುದರಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ, ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ.