ಬರೋಬ್ಬರಿ 6,100 ಅಡಿ ಎತ್ತರದಲ್ಲಿ ಎರಡು ಏರ್ ಬಲೂನ್‌ಗಳ ನಡುವೆ ನಡೆದ ಬ್ರೆಜಿಲ್ ವ್ಯಕ್ತಿಯೊಬ್ಬರು ಹೊಸ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.
34 ವರ್ಷದ ರಾಫೆಲ್ ಝುಗ್ನೋ ಬ್ರಿಡಿ ಸ್ಲಾಕ್‌ಲೈನ್‌ನಲ್ಲಿ ಈ ದಾಖಲೆಗೆ ಪಾತ್ರರಾದವರು. ಈತ ಗಾಳಿಯಲ್ಲಿ ಬರೋಬ್ಬರಿ 6,131 ಅಡಿಗಳಷ್ಟು ಎತ್ತರದಲ್ಲಿದ್ದರು. ಅವರು ವಿಶ್ವದ ಅತಿ ಎತ್ತರದ ಕಟ್ಟಡವಾದ 2,722 ಅಡಿಗಳಷ್ಟು ಎತ್ತರವಿರುವ ಬುರ್ಜ್ ಖಲೀಫಾದ ಎರಡು ಪಟ್ಟು ಎತ್ತರದಲ್ಲಿದ್ದರು. ಈ ಮೂಲಕ ಬಿಗಿಹಗ್ಗದ ನಡಿಗೆಯ ದಾಖಲೆಯನ್ನು ಮುರಿದಿದ್ದಾರೆ.
ಕಷ್ಟಕರವಾದ ದಾಖಲೆಗಳನ್ನು ಇಷ್ಟಪಡುವುದಾಗಿ ಹೇಳಿದ ರಾಫೆಲ್, ಸಣ್ಣ ತಪ್ಪಾದರೂ ಅನಾಹುತ ಸಂಭವಿಸಬಹುದಿತ್ತು. ಎಲ್ಲಾ ಕಾರ್ಯವಿಧಾನಗಳನ್ನು ವಿವರವಾಗಿ ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ತನ್ನ ಗಮನವು ಸಂಪೂರ್ಣವಾಗಿ ಕೇಂದ್ರೀಕೃತವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಎರಡು ಬಲೂನ್ ಗಳ ಮಧ್ಯೆ ಹಗ್ಗದ ಮುಖಾಂತರ ದಾಟುವ ಸಮಯದಲ್ಲಿ ಪರಿಪೂರ್ಣ ಸಮತೋಲನವನ್ನು ಕಂಡುಕೊಳ್ಳಲು ಸಹಾಯ ಮಾಡಿದ ತಂಡದ ಸದಸ್ಯರನ್ನು ಅವರು ಗೌರವಿಸಿದ್ದಾರೆ.