ಓಲಾ ಎಸ್-1 ಮತ್ತು ಎಸ್-1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈ ವರ್ಷದ ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಸುದ್ದಿಯಲ್ಲಿವೆ. ಆರಂಭದಲ್ಲಿ, ಸ್ಕೂಟರ್ ಗಳು ತಮ್ಮ ಸವಾರಿ ಶ್ರೇಣಿ ಮತ್ತು ಆಧುನಿಕ ವೈಶಿಷ್ಟ್ಯಗಳಿಗಾಗಿ ಜನಪ್ರಿಯವಾದವು.
ಇದೀಗ ಈ ಸ್ಕೂಟರ್ ಗಳು ಸುದ್ದಿಯಲ್ಲಿವೆ. ಅದೇನೆಂದರೆ, ಹಲವಾರು ಗ್ರಾಹಕರು ಓಲಾ ಸ್ಕೂಟರ್ ಗಳೊಂದಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ಕೆಲವು ಗ್ರಾಹಕರು ವಾಹನದಲ್ಲಿ ಗೀರುಗಳು ಮುಂತಾದ ಹಾನಿಗೊಳಗಾದ ವಾಹನಗಳನ್ನು ವಿತರಿಸಲಾಗಿದೆ ಎಂದು ದೂರಿದ್ದಾರೆ. ಆದರೆ, ಕೆಲವರು ಯಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಓಲಾ ಎಸ್-1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತೆಗೆದುಕೊಂಡ ಗ್ರಾಹಕರೊಬ್ಬರು ಡೆಲಿವರಿ ಸಮಯದಲ್ಲಿ ತಮ್ಮ ಸ್ಕೂಟರ್ ನಲ್ಲಿನ ಡೆಂಟ್‌ಗಳು ಮತ್ತು ಗೀರುಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದಾರೆ. ಇತರ ಕೆಲವು ಗ್ರಾಹಕರು ಕೂಡ ತಮ್ಮ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಸಾಗಣೆಯ ಸಮಯದಲ್ಲಿ ಸ್ಕೂಟರ್‌ಗಳಿಗೆ ಈ ಡೆಂಟ್‌ಗಳು ಮತ್ತು ಗೀರುಗಳಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಕೆಲವು ಗ್ರಾಹಕರು ಒಲಾ ಹಾನಿಗೊಳಗಾದ ಪ್ಯಾನೆಲ್‌ಗಳನ್ನು ಬದಲಾಯಿಸಲು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ತಾವು ಹೊಸ ಸ್ಕೂಟರ್ ಅನ್ನು ಬುಕ್ ಮಾಡಿದ್ದು, ಅದರ ರಿಪೇರಿ ಮಾಡುವುದಕ್ಕೆ ಅಲ್ಲವೆಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇನ್ನು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಶ್ರೇಣಿ ಸಮಸ್ಯೆಯು ಇರುವ ಬಗ್ಗೆ ಕೆಲ ಗ್ರಾಹಕರು ದೂರಿದ್ದಾರೆ. ಬ್ರೇಕಿಂಗ್ ಶಬ್ಧದಂತಹ ಸಮಸ್ಯೆಯು ಇದ್ದು, ಇಂತಹ ಗ್ರಾಹಕರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದುರಸ್ತಿಗಾಗಿ ಕಂಪನಿಗೆ ಹಿಂತಿರುಗಿಸಬೇಕಾಗಿದೆ.