ಎಂಇಎಸ್ ಪುಂಡರ ಉದ್ಧಟತನವನ್ನು ಪ್ರಶ್ನಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 31ರಂದು ಕರೆ ನೀಡಿರುವ ಕರ್ನಾಟಕ ಬಂದ್ನ್ನು ಕೈ ಬಿಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ನಾವು ಈಗಾಗಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಮಾಧ್ಯಮಗಳ ಮೂಲಕ ಮನವಿ ಮಾಡುತ್ತಿದ್ದೇನೆ, ದಯಮಾಡಿ ಬಂದ್ ಕರೆಯನ್ನು ಕೈ ಬಿಡಿ. ಈಗಾಗಲೇ ಕೋವಿಡ್ ಸಮಸ್ಯೆ ಎದುರಾಗಿದೆ . ಹೀಗಾಗಿ ಬಂದ್ ಮಾಡಿ ಮತ್ತಷ್ಟು ಸಮಸ್ಯೆ ಮಾಡಬೇಡಿ ಎಂದು ಹೇಳಿದರು.
ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ನಾವು ಕಾನೂನಾತ್ಮಕ ಹೋರಾಟಗಳನ್ನು ನಡೆಸುತ್ತಿದ್ದೇವೆ. ಈ ಮನವಿಯ ಬಳಿಕವೂ ಬಲವಂತದ ಬಂದ್ ಗೆ ಮುಂದಾದ್ರೆ ಅಲ್ಲಿಯೇ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.