ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಇತ್ತೀಚೆಗೆ ಕೆಲವರು ದ್ವೇಷದ ಭಾಷಣಗಳನ್ನ ಮಾಡಿದ್ದಾರೆ ಎಂಬ ಚರ್ಚೆ ತೀವ್ರವಾಗಿದೆ. ಈ ಬಗ್ಗೆ ತೀವ್ರ ಚರ್ಚೆ ಮತ್ತು ಆಕ್ರೋಶದ ನಡುವೆಯೆ, ದಾಸ್ನಾ ದೇವಸ್ಥಾನದ ಅರ್ಚಕ ಯತಿ ನರಸಿಂಗಾನಂದ್ ಅವರು ಘಟನೆಯ ಬಗ್ಗೆ ತಮಾಷೆ ಮಾಡಿದ್ದಾರೆ. ಧರ್ಮ ಸಂಸದ್ ನ ಅಧ್ಯಕ್ಷತೆ ವಹಿಸಿಕೊಂಡಿದ್ದ ಯತಿ ನರಸಿಂಗಾನಂದ್ ಅವರು, ಪೊಲೀಸರು ನಮ್ಮವರ ಪರವಾಗಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.
ವಿಡಿಯೋದಲ್ಲಿ ಆರೋಪಿ ಸಾಧ್ವಿ ಅನ್ನಪೂರ್ಣ ಅವರು ಪ್ರಕರಣದ ತನಿಖೆ ನಡೆಸುವಾಗ ಪೊಲೀಸ್ ಅಧಿಕಾರಿ ಸಮಾನ ಮತ್ತು ನ್ಯಾಯಯುತವಾಗಿ ವರ್ತಿಸುವಂತೆ ಕೇಳಿದಾಗ, ಯತಿ ನರಸಿಂಹಾನಂದರು ಮಧ್ಯ ಪ್ರವೇಶಿಸಿ, “ಏನು ನ್ಯಾಯ, ಅವನು ನಮ್ಮ ಕಡೆ ಇದ್ದಾನೆ” ಎಂದರು. ಪೊಲೀಸ್ ಅಧಿಕಾರಿ ಕೂಡ ಯತಿಯವರು ಹೇಳಿದ ರೀತಿಗೆ ನಕ್ಕರು.
ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ವಸೀಂ ರಿಜ಼್ವಿ(ಈಗ ಜೀತೇಂದ್ರ ನಾರಾಯಣ್ ಸಿಂಗ್ ತ್ಯಾಗಿ) ಅವರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆಂದು ಕಳೆದ ಗುರುವಾರ ಪೊಲೀಸ್ ಪ್ರಕರಣ ದಾಖಲಿಸಲಾಗಿತ್ತು.
ಈಗ ಅದೇ ಆರೋಪದಡಿಯಲ್ಲಿ ಸ್ವಾಮಿ ಧರ್ಮದಾಸ್ ಮತ್ತು ಸಾಧ್ವಿ ಅನ್ನಪೂರ್ಣ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರು ಡಿಸೆಂಬರ್ 16 ರಿಂದ 19 ರ ವರೆಗೆ ಮೂರು ದಿನಗಳ ಕಾಲ ಹರಿದ್ವಾರದ ವೇದ ನಿಕೇತನ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.