ಎರಡು ದಿನಗಳ ಕಾರ್ಯಕಾರಿಣಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎರಡು ದಿನಗಳ ಕಾಲ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಲು ಬೂತ್ ಮಟ್ಟದಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅರುಣ್ ಸಿಂಗ್, 60 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ. 150 ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ. ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಇಬ್ಬರು ಸಿಎಂ ಅಭ್ಯರ್ಥಿಗಳಿಂದ ಕಾಂಗ್ರೆಸ್ನಲ್ಲಿ ಕಿತ್ತಾಟ ಆರಂಭವಾಗಿದೆ. ಡಿಕೆಶಿ ಬೆಂಬಲಿಗರು ಡಿಕೆಶಿ ಸಿಎಂ ಆಗಲಿ ಅಂತಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎಂದು ಇನ್ನೊಂದು ಬಣ ಹೇಳುತ್ತೆ. ಕಾಂಗ್ರೆಸ್ ಒಂದು ಒಡೆದ ಮನೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿಯೂ ಮಾತನಾಡಿದ ಅವರು ಸಿಎಂ ಸ್ಥಾನದಿಂದ ಬೊಮ್ಮಾಯಿ ಅವರನ್ನು ಕೆಳಗಿಳಿಸುವ ಪ್ರಶ್ನೆಯೇ ಇಲ್ಲ. ಬೊಮ್ಮಾಯಿ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಬಿಜೆಪಿಯಲ್ಲಿ ಯಡಿಯೂರಪ್ಪ ಪರಮೋಚ್ಛ ನಾಯಕ. ಯಡಿಯೂರಪ್ಪ ಮಾರ್ಗದರ್ಶನ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಪುನರುಚ್ಛರಿಸಿದರು .