ಜೇನುನೊಣಗಳ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಅವು ಗೂಡನ್ನು ಕಟ್ಟುವ ಬಗ್ಗೆ , ಜೇನನ್ನು ತಯಾರಿಸುವ ಬಗ್ಗೆ ಹೀಗೆ ಎಲ್ಲಾ ಮಾಹಿತಿ ನಿಮಗಿದ್ದಿರಬಹುದು. ಆದರೆ ಎಂದಾದರೂ 20 ಸಾವಿರ ಜೇನುನೊಣಗಳು ಒಂದು ಕಾರನ್ನು ಹಿಂಬಾಲಿಸಿದ ಬಗ್ಗೆ ನೀವು ಕೇಳಿದ್ದೀರೇ..? ಕೇಳಿಲ್ಲ ಎಂದಾದರೆ ನೀವು ಈ ವಿಚಿತ್ರ ಸ್ಟೋರಿಯನ್ನು ಓದಲೇಬೇಕು.
ಜೇನುಗಳ ಗುಂಪಿನಲ್ಲಿ ರಾಣಿ ಜೇನಿಗೆ ತುಂಬಾನೇ ಮಹತ್ವ ಇರುತ್ತೆ.ಇದೇ ರೀತಿ ಬ್ರಿಟನ್ನ ನಗರವೊಂದರಲ್ಲಿ ರಾಣಿ ಜೇನಿನ ಹುಡುಕಾಟದಲ್ಲಿದ್ದ ಜೇನಿನ ಗುಂಪೊಂದು ಬರೋಬ್ಬರಿ 2 ದಿನಗಳ ಕಾಲ ಕಾರೊಂದನ್ನು ಹಿಂಬಾಲಿಸಿವೆ. ಈ ರೀತಿಯಾಗಿ ಕಾರನ್ನು ಜೇನುನೊಣಗಳು ಹಿಂಬಾಲಿಸುತ್ತಿರೋದನ್ನು ಕಂಡ ಜನತೆ ಆಶ್ಚರ್ಯಚಕಿತರಾದರು. ಅಂದರೆ ಈ ಕಾರನ್ನು ಜೇನುನೊಣಗಳೇನು ಇಷ್ಟ ಪಟ್ಟಿರಲಿಲ್ಲ. ಆದರೆ ಕಾರಿನ ಒಳಗೆ ರಾಣಿ ಜೇನು ಸಿಲುಕಿದ್ದರಿಂದ ಅದರ ರಕ್ಷಣೆಗೆಂದು ಈ 20 ಸಾವಿರಕ್ಕೂ ಅಧಿಕ ಜೇನು ನೊಣಗಳು ಕಾರನ್ನೇ ಹಿಂಬಾಲಿಸಿವೆ.
68 ವರ್ಷದ ಕರೋಲ್ ಹೊವಾರ್ತ್ ಎಂಬವರಿಗೆ ಸೇರಿದ ಕಾರು ಇದಾಗಿದೆ. ಬ್ರಿಟನ್ನ ವೇಲ್ಸ್ ಎಂಬಲ್ಲಿ 2 ದಿನಗಳ ಕಾಲ ಕಾರನ್ನು ಜೇನುನೊಣಗಳು ಬೆನ್ನಟ್ಟಿವೆ. ಕಾರಿನ ಹಿಂಭಾಗದಲ್ಲಿ ಜೇನುನೊಣಗಳು ಇರೋದನ್ನು ಕಂಡ ಕಾರಿನ ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಶಾಪಿಂಗ್ ಮುಗಿಸಿ ಕಾರಿನತ್ತ ವಾಪಸ್ಸಾಗುತ್ತಿದ್ದ ವೇಳೆ ಹಿಂಬದಿಯಿದ್ದ ಜೇನುನೊಣಗಳನ್ನು ಕಂಡ ಮಹಿಳೆ ಶಾಕ್ ಆಗಿದ್ದಾರೆ.
ಕಾರಿನ ಹಿಂಬದಿಯಲ್ಲಿದ್ದ ಜೇನುಗಳನ್ನು ಬೀ ಫಾರ್ಮಿಂಗ್ ಮೂಲಕ ಕಾರಿನಿಂದ ಓಡಿಸಲಾಯಿತು. ಆದರೆ ಮಾರನೇ ದಿನ ಕೂಡ ಜೇನು ನೊಣಗಳು ಬಂದು ಕಾರಿಗೆ ಅಂಟಿಕೊಂಡಿವೆ. ಕಾರಿನಿಂದ ರಾಣಿ ಜೇನನ್ನು ಹೊರ ಹಾಕದ ಹೊರತು ಜೇನುನೊಣಗಳಿಂದ ಕಾರಿಗೆ ಮುಕ್ತಿ ಸಿಗೋದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.