ಅಲ್ಜೀರಿಯಾದ ಸ್ಕಿಕ್ಡಾ ಎಂಬಲ್ಲಿ 73 ವರ್ಷದ ಮಹಿಳೆಯ ಗರ್ಭದಲ್ಲಿ ಕಲ್ಲಿನ ಮಗುವೊಂದು ಪತ್ತೆಯಾದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಅಂದಹಾಗೆ ಈ 73 ವರ್ಷದ ವೃದ್ಧೆ ತಮ್ಮ ಗರ್ಭದಲ್ಲಿ ಬರೋಬ್ಬರಿ 35 ವರ್ಷಗಳ ಕಾಲ ಈ ಕಲ್ಲಿನ ಮಗುವನ್ನು ಹೊತ್ತಿದ್ದಾರೆ.
ಅಲ್ಜಿರಿಯಾದ ಆರೋಗ್ಯ ಕೇಂದ್ರವೊಂದರಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಹೊಟ್ಟೆ ನೋವು ಎಂದುಕೊಂಡ ವೃದ್ಧೆ ಆಸ್ಪತ್ರೆಗೆ ಭೇಟಿ ನೀಡಿದ ವೇಳೆಯಲ್ಲಿ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮೂರು ದಶಕಗಳ ಕಾಲ ಈ ಕಲ್ಲಿನ ಮಗು ಆಕೆಯ ಹೊಟ್ಟೆಯಲ್ಲಿಯೇ ಇದ್ದರೂ ಸಹ ವೃದ್ಧೆಗೆ ಯಾವುದೇ ರೀತಿಯ ಅನುಭವ ಆಗಿರಲಿಲ್ಲವಂತೆ.
ಈ ಕಲ್ಲಿನ ಮಗು ವೈದ್ಯಕೀಯ ಲೋಕದಲ್ಲಿಯೇ ಹೊಸ ಅಚ್ಚರಿಗೆ ಕಾರಣವಾಗಿದೆ. ಅಂದಹಾಗೆ ಈ ರೀತಿಯ ಕಲ್ಲು ಮಗುವಿಗೆ ಜನ್ಮ ನೀಡಿದ ಮೊದಲ ಮಹಿಳೆ ಇವರಲ್ಲ. ಇದೊಂದು ಅತ್ಯಂತ ಅಪರೂಪದ ಸ್ಥಿತಿಯಾಗಿದ್ದು ಲಿಥೋಪಿಡಿಯನ್ ಎಂಬ ಕ್ಯಾಲ್ಸಿಫೈಡ್ ಭ್ರೂಣವು ಯಾವುದೇ ಬಾಹ್ಯ ಲಕ್ಷಣಗಳಿಲ್ಲದೇ ಮಹಿಳೆಯ ಗರ್ಭಾಶಯದಲ್ಲಿ ವರ್ಷಗಳ ಕಾಲ ಇರಬಲ್ಲದು. ಇಲ್ಲಿವರೆಗೆ ಜಗತ್ತಿನಾದ್ಯಂತ ಕೇವಲ 290 ಲಿಥೋಪಿಡಿಯನ್ ಪ್ರಕರಣಗಳು ವರದಿಯಾಗಿವೆ.
ಮೊಟ್ಟ ಮೊದಲ ಬಾರಿಗೆ ಅಂದರೆ 1582ರಲ್ಲಿ ಫ್ರೆಂಚ್ನ ಮೇಡಂ ಕೊಲೊಂಬೆ ಚತ್ರಿ ಎಂಬವರು ತಮ್ಮ 68ನೇ ವಯಸ್ಸಿಗೆ ನಿಧನರಾಗಿದ್ದರು. ಈ ವೇಳೆಯಲ್ಲಿ ಅವರ ಹೊಟ್ಟೆಯಲ್ಲಿ ಕಲ್ಲಿನ ಮಗು ಇರುವ ವಿಚಾರ ಬೆಳಕಿಗೆ ಬಂದಿತ್ತು.