ಕಬ್ಬಿಣದ ಸರಳುಗಳ ಮೇಲೆ ಹಾಕಿದ್ದ ಬಟ್ಟೆ ತೆಗೆಯಲು ಹೋದ ಸಂದರ್ಭದಲ್ಲಿ ವಿದ್ಯುತ್ ತಗುಲಿ ತಂದೆ ಹಾಗೂ ಎರಡು ವರ್ಷದ ಮಗಳು ಸಾವನ್ನಪ್ಪಿದ್ದು, ತಾಯಿಯ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಈ ಘಟನೆ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಇಸ್ನಾಪುರದಲ್ಲಿ ನಡೆದಿದ್ದು, ವಾಸು ಮಲ್ಲಿಕ್ ಹಾಗೂ ಆತನ ಎರಡು ವರ್ಷದ ಮಗಳು ಸಾವನ್ನಪ್ಪಿದವರು. ಪತ್ನಿ ರೀನಾ ಮಲ್ಲಿಕ್ ಸ್ಥಿತಿ ಗಂಭೀರವಾಗಿದೆ.
ಮೃತರು ಒಡಿಶಾ ರಾಜ್ಯದವರು ಎನ್ನಲಾಗಿದ್ದು, ಕೆಲಸ ಅರಸಿ, ಇಲ್ಲಿಗೆ ಬಂದು ನೆಲೆಸಿದ್ದರು ಎನ್ನಲಾಗಿದೆ. ಕಬ್ಬಿಣದ ಸರಳಿನ ಮೇಲೆ ಬಟ್ಟೆಗಳನ್ನು ಸ್ವಚ್ಛಗೊಳಿಸಿ ಒಣಗಲು ಹಾಕಲಾಗಿತ್ತು. ಆನಂತರ ವಾಸು ಮಲ್ಲಿಕ್ ಬಟ್ಟೆ ತೆಗೆಯಲು ಹೋಗಿದ್ದು, ಆಗ ಅವರಿಗೆ ವಿದ್ಯುತ್ ತಗುಲಿದೆ. ಆಗ ಮಗಳು ಬಂದು ತಂದೆಯನ್ನು ಹಿಡಿದಿದ್ದಾಳೆ. ಅವಳೂ ಸಾವನ್ನಪ್ಪಿದ್ದು, ತಾಯಿ ಬಂದು ಮಗು ಎತ್ತಿಕೊಳ್ಳುತ್ತಿದ್ದಂತೆ ಶಾಕ್ ಹೊಡೆದಿದೆ.
ಸದ್ಯ ರೀನಾ ಮಲ್ಲಿಕ್ ಪರಿಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.