ನವದೆಹಲಿ: ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೃಷಿ ಕಾಯ್ದೆಯನ್ನು ಮತ್ತೆ ಮಂಡಿಸುವ ಸುಳಿವು ನೀಡಿದ್ದರು.
ರೈತರ ಕಲ್ಯಾಣಕ್ಕಾಗಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು. ಆದರೆ, ಕೆಲವರು ಸಂಸತ್ತಿನಲ್ಲಿ ಚರ್ಚೆ ನಡೆದಿಲ್ಲ ಎಂದು ವಿನಾಕಾರಣ ಆರೋಪಿಸಿ ತಗಾದೆ ತೆಗೆದ ಕಾರಣ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ. ಈಗ ನಾವು ಒಂದು ಹೆಜ್ಜೆ ಹಿಂದೆ ಸರಿದಿರಬಹುದು. ಆದರೆ, ರೈತರ ಏಳಿಗೆಗೆ ಮುಂದಿನ ಹೆಜ್ಜೆಯನ್ನು ಇಡುತ್ತೇವೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದರು.
ಈ ಹೇಳಿಕೆ ನಂತರ ಅವರು ಕೃಷಿ ಕಾಯ್ದೆಗಳನ್ನು ಮತ್ತೆ ಮಂಡಿಸುವ ಸುಳಿವು ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ನರೇಂದ್ರ ಸಿಂಗ್ ತೋಮರ್ ಅವರ ಹೇಳಿಕೆ ಉಲ್ಲೇಖಿಸಿದ ಕಾಂಗ್ರೆಸ್ ಪಕ್ಷ, ವಿಧಾನಸಭೆ ಚುನಾವಣೆ ನಂತರ ಕೃಷಿ ಕಾಯ್ದೆ ಜಾರಿಗೊಳಿಸಲಿದೆ ಎಂದು ಆರೋಪಿಸಿದ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದು, ಮತ್ತೆ ಕಾಯ್ದೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.