ಚಳಿಗಾಲದ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡಲು ಜನರು ಅನೇಕ ವಿನೂತನ ಯೋಜನೆಗಳನ್ನು ಕಾರ್ಯಗತಗೊಳಿಸಿದ್ರೂ, ಚಳಿಯಲ್ಲಿ ಹೊರಗಡೆ ಸ್ನಾನ ಮಾಡುವುದೆಂದ್ರೆ ಬಹಳ ಕಷ್ಟ. ಆದರೆ, ಗಡಗಡ ನಡುಗುವ ಚಳಿಯಲ್ಲಿ ಬಾಲಕನೊಬ್ಬ ತೆರೆದ ಬಯಲಿನಲ್ಲಿ ಸ್ನಾನ ಮಾಡಿದ್ದಾನೆ. ಅಷ್ಟಕ್ಕೂ ಆತ ಮಾಡಿರೋ ಉಪಾಯ ಕೇಳಿದ್ರೆ, ಅಚ್ಚರಿ ಪಡ್ತೀರಾ..!
ಈ ವಿಡಿಯೋವನ್ನು ಇತ್ತೀಚೆಗೆ ಕೂ ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮಂಜು ಮುಸುಕಿದ ವಾತಾವರಣದ ನಡುವೆ ಬಾಲಕ ಬೆಳಿಗ್ಗೆ ಸ್ನಾನ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನೀರನ್ನು ಬಿಸಿಮಾಡಲು, ಹುಡುಗನು ಒಂದು ದೊಡ್ಡ ಲೋಹದ ಮಡಕೆಯನ್ನು (ಕಡಾಯಿ) ತೆಗೆದುಕೊಂಡು, ಸೌದೆ ಒಲೆ ಮೂಲಕ ಉರಿಸಿದ್ದಾನೆ.
ಇನ್ನು ಬಿಸಿ ನೀರಿನ ಸ್ನಾನ ಮಾಡಲು ಬಾಲಕ ಕಡಾಯಿ ಮೇಲೆಯೇ ಕುಳಿತುಕೊಂಡು ನೀರನ್ನು ಎರಚಿಕೊಂಡಿದ್ದಾನೆ. ಲೋಹದ ಮಡಿಕೆಯ ಕೆಳಗೆ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಕೂಡ ಅದರ ಮೇಲೆ ಕುಳಿತು ನೀರನ್ನು ಹುಯ್ದುಕೊಳ್ಳುತ್ತಿರುವ ದೃಶ್ಯ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ನಾನದ ನೀರನ್ನು ಮರುಬಳಕೆ ಮಾಡುವ ಮೂಲಕ ನೀರನ್ನು ಕೂಡ ಉಳಿಸಿದ್ದಾನೆ.
ಬಾಲಕನ ಕಲ್ಪನೆಯು ನವೀನವಾಗಿದ್ದರೂ, ಇದು ಅತ್ಯಂತ ಅಪಾಯಕಾರಿ ಮತ್ತು ಅಸುರಕ್ಷಿತವಾಗಿದೆ. ಮಡಕೆ ಅಥವಾ ನೀರಿನ ಬಿಸಿಯಾದ ತಾಪಮಾನವು ಅವನ ಚರ್ಮವನ್ನು ಸುಡಬಹುದು ಅಥವಾ ಬೆಂಕಿಯ ಮೇಲಿರುವ ಲೋಹದ ಮಡಕೆಯಿಂದ ಒಳಗೆ ಅಥವಾ ಹೊರಗೆ ಹೋಗುವಾಗ ಅವನು ಗಾಯಗೊಳ್ಳಬಹುದಾದ ಅಪಾಯವಿದೆ.