ಮ್ಯಾನ್ಮಾರ್ ದೇಶ ಹೊತ್ತಿ ಉರಿಯುತ್ತಿದೆ, ದೇಶದಲ್ಲಿ ಮಿಲಿಟರಿ ಆಡಳಿತದಿಂದ ಸಾರ್ವಜನಿಕರ ದಂಗೆ ಶುರುವಾಗಿದೆ. ಎಲ್ಲೆಡೆ ಮಾರಣಹೋಮ ನಡೆಯುತ್ತಿದೆ. ಇಂಥಾ ಸಂದರ್ಭದಲ್ಲಿ, ಮ್ಯಾನ್ಮಾರ್‌ನ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಕಾರ್ಡಿನಲ್ ಚಾರ್ಲ್ಸ್ ಬೊ, ದೇಶದ ಜುಂಟಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ನೊಂದಿಗೆ ಕೇಕ್ ಕತ್ತರಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕ್ರಿಸ್‌ಮಸ್ ಪ್ರಯುಕ್ತವಾಗಿ ಕಾರ್ಡಿನಲ್ ಚಾರ್ಲ್ಸ್ ಬೊ, ಜುಂಟಾ ಮುಖ್ಯಸ್ಥರನ್ನು ಭೇಟಿಯಾಗಿ, ಸಭೆ ನಡೆಸಿದ್ದಾರೆ ಎಂದು ಮ್ಯಾನ್ಮಾರ್ ನ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ದೇಶದಲ್ಲಿ “ಶಾಂತಿಯುತ ಮತ್ತು ಸಮೃದ್ಧ ವ್ಯವಹಾರಗಳ ಬಗ್ಗೆ ಮಾತನಾಡುವ ಉದ್ದೇಶದಿಂದ ಈ ಸಭೆ ನಡೆಸಲಾಗಿದೆ ಎಂದು ದೇಶದ ಸರ್ಕಾರಿ ಮಾಧ್ಯಮದಲ್ಲಿ ತಿಳಿಸಲಾಗಿದೆ. ಈ ವೇಳೆ ಪ್ರಕಟಿಸಿದ ಫೋಟೋಗಳಲ್ಲಿ, ಇಬ್ಬರು ಕ್ರಿಸ್ಮಸ್ ಟ್ರೀ ಮುಂದೆ ಒಟ್ಟಿಗೆ ಕುಳಿತಿದ್ದಾರೆ.
ಇನ್ನೊಂದು ಫೋಟೊದಲ್ಲಿ ಇಬ್ಬರು ಕೇಕ್ ಕತ್ತರಿಸುತ್ತಿರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ, ಜುಂಟಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ $11,200 ದೇಣಿಗೆಯನ್ನು ಕಾರ್ಡಿನಲ್ ಗೆ ಹಸ್ತಾಂತರಿಸುತ್ತಿರುವುದನ್ನು ಗುರುತಿಸಲಾಗಿದೆ.
ಈ ಫೋಟೋಗಳು ಪ್ರಜಾಪ್ರಭುತ್ವ ಪರ ನಾಗರಿಕರನ್ನ ಕೆರಳಿಸಿದೆ. ಆಂಗ್ ಸಾನ್ ಸೂಕಿ ಅವರ ಪ್ರಜಾಪ್ರಭುತ್ವ ಸರ್ಕಾರವನ್ನು ಪತನಗೊಳಿಸಿ, ಜುಂಟಾದ ಮಿಲಿಟರಿ ಆಡಳಿತ ಅಧಿಕಾರಕ್ಕೇರಿದಾಗಿನಿಂದಲೂ ಸಾರ್ವಜನಿಕರು ಮ್ಯಾನ್ಮಾರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 1,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ ನೂರಾರು ಮಂದಿ ಗಾಯಗೊಂಡಿದ್ದಾರೆ, ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ.
ಇಂಥಾ ಸಂದರ್ಭದಲ್ಲಿ ಕಾರ್ಡಿನಲ್, ಜುಂಟಾ ಮುಖ್ಯಸ್ಥನನ್ನ ಭೇಟಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಡಿನಲ್ ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ನಾಗರಿಕರು, ಆತ ಅಧಿಕಾರಕ್ಕೆ ಬರಲು ಸಾವಿರಾರು ಜನರ ರಕ್ತ ಹರಿಸಿದ್ದಾನೆ. ಕ್ರೈಸ್ತ ಚರ್ಚುಗಳಿಗೆ ಬೆಂಕಿ ಹಚ್ಚಿದ್ದಾನೆ, ಅಂತವನಿರುವ ಕಡೆ ಕ್ರಿಸ್ಮಸ್ ಆಚರಣೆ ಹೇಗೆ ಸಾಧ್ಯ. ಕೊಲೆಗಾರನೊಂದಿಗೆ ಹೇಗೆ ಕೇಕ್ ಕಟ್ ಮಾಡಿದ್ದೀರಾ..? ಇಂಥವನನ್ನ ಹೇಗೆ ಕ್ಷಮಿಸಿದ್ದೀರಾ ಎಂದು ಕಾರ್ಡಿನಲ್ ಬೊ ಅವ್ರನ್ನ ಪ್ರಶ್ನಸಿದ್ದಾರೆ.