ಕೋವಿಡ್ 19ನ ಹೊಸ ರೂಪಾಂತರಿಯಾದ ಓಮಿಕ್ರಾನ್ ಸೋಂಕು ಸಂಪೂರ್ಣ ಲಸಿಕೆ ಪಡೆದ 10 ಮಂದಿಯಲ್ಲಿ ಕನಿಷ್ಟ 9 ಮಂದಿಗೆ ತಗಲುವಷ್ಟು ಪ್ರಭಾವವನ್ನು ಹೊಂದಿದೆ ಎಂದು ದೇಶದಲ್ಲಿ ವರದಿಯಾದ 183 ಓಮಿಕ್ರಾನ್ ಪ್ರಕರಣಗಳ ವಿಶ್ಲೇಷಣೆಯು ತಿಳಿಸಿದೆ.
ದೇಶದಲ್ಲಿ ವರದಿಯಾಗುತ್ತಿರುವ ಓಮಿಕ್ರಾನ್ ಪ್ರಕರಣಗಳ ವರದಿಯನ್ನು ಅವಲೋಕಿಸಿದ ಕೇಂದ್ರವು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೊರೊನಾ ಲಸಿಕೆಯು ಸಾಕಾಗುವುದಿಲ್ಲ ಎಂದು ಹೇಳಿದೆ. ಹೀಗಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳು ಕೊರೊನಾ ಸೋಂಕಿನ ಸರಪಳಿಯನ್ನು ಮುರಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಬಿಡುಗಡೆ ಮಾಡಿರುವ ವಿಶ್ಲೇಷಣೆಯ ಪ್ರಕಾರ 27 ಪ್ರತಿಶತ ಪ್ರಕರಣಗಳು ವಿದೇಶಿ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಎಂಬುದನ್ನು ತೋರಿಸುತ್ತಿದೆ. ಇದರಿಂದ ಓಮಿಕ್ರಾನ್ ಕಮ್ಯೂನಿಟಿ ಸ್ಪ್ರೆಡ್ ಆಗಿದೆ ಎಂಬುದನ್ನು ತಿಳಿಯಬಹುದಾಗಿದೆ.
ಸೋಂಕಿಗೆ ಒಳಗಾದವರಲ್ಲಿ 87 ವ್ಯಕ್ತಿಗಳು ಅಂದರೆ 91 ಪ್ರತಿಶತ ಮಂದಿ ಸಂಪೂರ್ಣ ಲಸಿಕೆಯನ್ನು ಪಡೆದಿದ್ದಾರೆ. ಮೂವರು ಬೂಸ್ಟರ್ ಡೋಸ್ ಪಡೆದಿದ್ದಾರೆ. 183 ಮಂದಿಯಲ್ಲಿ ಕೇವಲ 7 ಮಂದಿ ಮಾತ್ರ ಕೊರೊನಾ ಲಸಿಕೆಯನ್ನು ಪಡೆದಿಲ್ಲ. ಇವರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಕೋವಿಡ್ 19 ಕಾರ್ಯಪಡೆಯ ಮುಖ್ಯಸ್ಥ ಡಾ. ವಿಕೆ ಪೌಲ್, ಡೆಲ್ಟಾಗೆ ಹೋಲಿಕೆ ಮಾಡಿದರೆ ಓಮಿಕ್ರಾನ್ ಹೆಚ್ಚಿನ ಹರಡುವಿಕೆಯನ್ನು ಹೊಂದಿದೆ. ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್ ಹೆಚ್ಚಾಗಿ ಹರಡುತ್ತದೆ. ಒಬ್ಬ ವ್ಯಕ್ತಿಯು ಮನೆಯಿಂದ ಹೊರಬಂದ ವೇಳೆಯಲ್ಲಿ ಮಾಸ್ಕ್ ಧರಿಸದೇ ಹೋದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆತ ಮನೆಗೆ ಬಂದು ಇತರೆ ಕುಟುಂಬ ಸದಸ್ಯರಿಗೆ ಸೋಂಕು ತಗುಲಿಸುತ್ತಾನೆ. ಓಮಿಕ್ರಾನ್ ವಿಚಾರದಲ್ಲಂತೂ ಈ ಅಪಾಯ ಹೆಚ್ಚು ಎಂದು ಹೇಳಿದ್ದಾರೆ.