ಇದೇ ವರ್ಷ ಒಂದು ದೇಶದ ಪ್ರಜಾಪ್ರಭುತ್ವ ಅಂತ್ಯಗೊಂಡಿತು. ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ತಮ್ಮ ವಶಕ್ಕೆ ಪಡೆದುಕೊಂಡು, ಆಡಳಿತ ಕುರ್ಚಿ ಏರಿದರು. ಆಗ ಅವರು ಮಾಡಿದ ಮೊದಲ ಕೆಲಸವೇ ನಾನಾ ಅಪರಾಧಗಳ ಮೇಲೆ ಜೈಲಿನಲ್ಲಿ ಬಂಧಿಯಾಗಿದ್ದ ಸಾವಿರಾರು ಜನರನ್ನ ಬಿಡುಗಡೆಗೊಳಿಸಿದ್ದು. ಈಗ ಅದೇ ಬಂಧಿತರು ಸ್ವತಂತ್ರರಾಗಿದ್ದಾರೆ, ತಮಗೆ ಕಾರಾಗೃಹ ಶಿಕ್ಷೆ ನೀಡಿದ ನ್ಯಾಯಾಧೀಶರ ವಿರುದ್ಧ ಸೇಡಿಗಾಗಿ ಹಾತೊರೆಯುತ್ತಿದ್ದಾರೆ.
ತಾಲಿಬಾನಿಗಳು ಆಕ್ರಮಿಸುವ ಮುನ್ನ ಆಫ್ಘಾನಿಸ್ತಾನದಲ್ಲಿ ಎಲ್ಲಾ ದೇಶದಲ್ಲಿರುವಂತೆ ನ್ಯಾಯಾಲಯ ಇತ್ತು. ಅನೇಕ ಆರೋಪ ಹೊತ್ತ ಆರೋಪಿಗಳ ವಿಚಾರಣೆ ನಡೆಯುತ್ತಿತ್ತು. ಆರೋಪ ಸಾಬೀತಾದಲ್ಲಿ ಅವರಿಗೆ ನ್ಯಾಯಾಧೀಶರು ಶಿಕ್ಷೆ ನೀಡುತ್ತಿದ್ದರು, ಅವ್ರನ್ನ ಜೈಲಿಗೆ ಕಳುಹಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಈ ಹಿಂದೆ ಸರ್ಕಾರದ ರಕ್ಷಣೆಯಲ್ಲಿದ್ದ ನ್ಯಾಯಾಧೀಶರು, ಸ್ವತಂತ್ರರಾಗಿರೊ ಖೈದಿಗಳಿಂದ ಕಣ್ಮರೆಯಾಗಿ ಕಣ್ತಪ್ಪಿಸಿಕೊಂಡು ಬದುಕುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಅಫ್ಘಾನಿಸ್ತಾನದ ಅತಿದೊಡ್ಡ ಕಾರಾಗೃಹ, ಪುಲ್-ಇ-ಚರ್ಖಿಯಲ್ಲಿ ಅತ್ಯಂತ ನಟೋರಿಯಸ್ ಅಪರಾಧಿಗಳನ್ನ ಬಂಧಿಸಲಾಗತ್ತೆ. ಅಂತಾ ಖೈದಿಗಳನ್ನು ಬಿಡುಗಡೆಗೊಳಿಸಿದ್ದ ತಾಲಿಬಾನ್, ಅವರಿಗೆ ವಿಡಿಯೋ ಮಾಡಲು ಅವಕಾಶ ನೀಡಿತ್ತು. ಈ ಬಿಡುಗಡೆಗೊಂಡ ಖೈದಿಗಳು ಕೈಯ್ಯಲ್ಲಿ ಚಾಕು ಹಿಡಿದು ತಮಗೆ ಶಿಕ್ಷೆ ನೀಡಿದ್ದ ನ್ಯಾಯಾಧೀಶರಿಗೆ ಧಮ್ಕಿ ಹಾಕಿದ್ದಾರೆ. ಈ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು, ನ್ಯಾಯಾದೀಶರೆ ಪ್ರಾಣಭಯದಿಂದ ಸಂಸಾರ ಸಮೇತವಾಗಿ ಯಾರಿಗೂ ಕಾಣದಂತೆ ಗುಪ್ತವಾಗಿ ಬದುಕುತ್ತಿದ್ದಾರೆ, ಇದು ಕೇವಲ ಒಬ್ಬರು ಇಬ್ಬರು ಕಥೆಯಲ್ಲ ಭಾಗಶಃ ಎಲ್ಲಾ ನ್ಯಾಯಾಧೀಶರ ಪರಿಸ್ಥಿತಿ ಹೀಗೆ ಇದೆ ಅನ್ನೋದೆ ಅತಿ ದೊಡ್ಡ ವಿಪರ್ಯಾಸ.