ಲಖ್ನೋ: ಚುನಾವಣಾ ರ್ಯಾಲಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ, ಚುನಾವಣೆಯನ್ನು ಮುಂದೂಡುವ ಬಗ್ಗೆಯೂ ಯೋಚಿಸುವಂತೆ ಚುನಾವಣಾ ಆಯೋಗ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲಹಾಬಾದ್ ಹೈಕೋರ್ಟ್ ಸೂಚಿಸಿದೆ.
ರಾಜ್ಯದಲ್ಲಿ ಚುನಾವಣಾ ರ್ಯಾಲಿಗಳು ಮತ್ತು ಸಭೆಗಳನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಪ್ರಧಾನಿ ಮತ್ತು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಹೊಸ ಕೋವಿಡ್ ರೂಪಾಂತರ ಓಮಿಕ್ರಾನ್ ಸಂಬಂಧಿತ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಸಮಯದಲ್ಲಿ ಅಲಹಾಬಾದ್ ಹೈಕೋರ್ಟ್ನಿಂದ ಇಂತಹ ಮಹತ್ವದ ಸೂಚನೆ ಬಂದಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊರೊನಾ ಮೂರನೇ ಅಲೆಯಿಂದ ಸಾರ್ವಜನಿಕರನ್ನು ಪಾರು ಮಾಡಲು ರಾಜಕೀಯ ಪಕ್ಷಗಳು ಚುನಾವಣಾ ರ್ಯಾಲಿಗಳನ್ನು ನಿಲ್ಲಿಸಿ ಜನಸಂದಣಿಯನ್ನು ನಿಯಂತ್ರಿಸಬೇಕು. ಟಿವಿ ಮತ್ತು ಪತ್ರಿಕೆಗಳ ಮೂಲಕ ಪ್ರಚಾರ ಮಾಡುವಂತೆ ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದು ಹೈಕೋರ್ಟ್ ಹೇಳಿದೆ.
ಪ್ರಧಾನಿ ಪಕ್ಷಗಳ ಚುನಾವಣಾ ಸಭೆಗಳು ಮತ್ತು ರ್ಯಾಲಿಗಳನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಚುನಾವಣೆಯನ್ನು ಮುಂದೂಡುವ ಬಗ್ಗೆಯೂ ಯೋಚಿಸಬೇಕು ಎಂದು ಕೋರ್ಟ್ ಹೇಳಿದ್ದು, ಭಾರತದಂತಹ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಪ್ರಧಾನಿ ಕೈಗೊಂಡಿರುವ ಉಚಿತ ಲಸಿಕೆ ಅಭಿಯಾನ ಶ್ಲಾಘನೀಯ ಎಂದು ಹೈಕೋರ್ಟ್ ದೇಶದ ಲಸಿಕಾ ಅಭಿಯಾನಕ್ಕಾಗಿ ಪ್ರಧಾನಿಯನ್ನು ಶ್ಲಾಘಿಸಿದೆ.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್, ಸಮಾಜವಾದಿ ಪಕ್ಷದ ನಾಯಕರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಾರಣದಿಂದ ಪದೇ ಪದೇ ಭೇಟಿ ನೀಡಿ ಸಮಾವೇಶ, ಕಾರ್ಯಕ್ರಮ ನಡೆಸುತ್ತಿದ್ದು, ಹೆಚ್ಚಿನ ಜನ ಸೇರುತ್ತಿದ್ದಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹಿನ್ನಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.