ಬೆಂಗಳೂರು: ಯಾವುದೇ ಪದವಿಯಲ್ಲಿ ಯಾವುದೇ ವಿಷಯ ಓದಿದ್ದರೂ, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಕುರಿತಂತೆ ಶಿಕ್ಷಣ ಇಲಾಖೆ ನಿಯಮಾವಳಿಗೆ ತಿದ್ದುಪಡಿ ತಂದಿದೆ. ಅನೇಕ ವಿಷಯಗಳಲ್ಲಿ ಪದವಿ ಪಡೆದು, ಬಿಎಡ್, ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಈ ಮೊದಲು ಆರರಿಂದ ಎಂಟನೇ ತರಗತಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಬಿಎಸ್ಸಿಯಲ್ಲಿ ಪಿಸಿಎಂ ಮತ್ತು ಬಿಎ ನಲ್ಲಿ ಇಂಗ್ಲಿಷ್ ಐಚ್ಛಿಕವಾಗಿ ಓದಿದವರಿಗೆ ಮಾತ್ರ ನೇಮಕಾತಿಯಲ್ಲಿ ಅವಕಾಶ ನೀಡುತ್ತಿದ್ದ ಕಾರಣ ಬೇರೆ ಪದವಿ ಪಡೆದವರಿಗೆ ಶಿಕ್ಷಕರ ಹುದ್ದೆ ಅವಕಾಶ ಇರಲಿಲ್ಲ. ಈಗ ಬಿಎಡ್ 2 ವರ್ಷದ ಕೋರ್ಸ್ ಆದ ನಂತರ ಯಾವುದೇ ಪದವಿಯಲ್ಲಿ ಓದಿದವರಿಗೂ ಬಿಎಡ್ ಮಾಡಲು ಅವಕಾಶ ನೀಡಿದ್ದು, ನೇಮಕಾತಿ ನಿಯಮದಲ್ಲಿ ಎಲ್ಲಾ ಪದವೀಧರರಿಗೆ ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಆರರಿಂದ ಎಂಟನೇ ತರಗತಿಯ ಶಿಕ್ಷಕರ ಸುಮಾರು 52,630 ಹುದ್ದೆಗಳು ಖಾಲಿ ಇದ್ದು, ಶೀಘ್ರವೇ 15 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ನೇಮಕಾತಿಯಿಂದ ವಂಚಿತರಾಗಿದ್ದ ಪದವೀಧರರಿಗೆ ಅವಕಾಶ ನೀಡಲಾಗುವುದು. ಈ ಪದವೀಧರರು ಬಿಎಡ್ ಮತ್ತು ಟಿಇಟಿ ಪಾಸ್ ಮಾಡುವುದು ಕಡ್ಡಾಯವಾಗಿರುತ್ತದೆ ಎನ್ನಲಾಗಿದೆ.