ವಿದ್ಯುತ್ ಕಂಬವನ್ನೇರಿದ ಮಾನಸಿಕ ಅಸ್ವಸ್ಥನೊಬ್ಬ ಅವಾಂತರವನ್ನೇ ಸೃಷ್ಟಿಸಿದ ಘಟನೆಯು ಮುಜಾಫರ ನಗರದ ಬರ್ಮಾತ್ಪುರ ಗ್ರಾಮದಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥನ ಹುಚ್ಚಾಟದಿಂದಾಗಿ ಇಡೀ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನು ಬಂದ್ ಮಾಡಲಾಗಿತ್ತು.
ವಿದ್ಯುತ್ ಕಂಬವನ್ನೇರಿದ್ದ ಮಾನಸಿಕ ಅಸ್ವಸ್ಥನು ತನಗೆ ಮೊಬೈಲ್ ಫೋನ್ ಹಾಗೂ ಸಿಹಿ ತಿಂಡಿ ಬೇಕೆಂದು ಬೇಡಿಕೆ ಇಟ್ಟಿದ್ದಾನೆ.
ವಿದ್ಯುತ್ ನಿಗಮದ ಸಿಬ್ಬಂದಿ, ಪೊಲೀಸರು, ಅಗ್ನಿಶಾಮಕದಳದ ಮನವಿಗೂ ಸ್ಪಂದಿಸದ ಮಾನಸಿಕ ಅಸ್ವಸ್ಥ ವಿದ್ಯುತ್ ಕಂಬದಲ್ಲಿಯೇ ಕೂತು ರಾದ್ಧಾಂತ ಮಾಡಿದ್ದಾನೆ.
ಕೆಳಗೆ ಬೀಳುತ್ತೇನೆ ಎಂಬ ಭಯವೂ ಇಲ್ಲದಂತೆ ಆತ ಹೈ ಟ್ರಾನ್ಸ್ಮಿಷನ್ ಎಲೆಕ್ಟ್ರಿಸಿಟಿ ಟವರ್ನ್ನು ಏರಿ ಅಲ್ಲಲ್ಲೇ ಸುತ್ತಾಡಿದ್ದಾನೆ. ತಡರಾತ್ರಿಯವರೆಗೂ ಮಾನಸಿಕ ಅಸ್ವಸ್ಥನನ್ನು ಕೆಳಗೆ ಇಳಿಸಲು ಸಾಕಷ್ಟು ಹರಸಾಹಸ ಮಾಡಲಾಯ್ತಾದರೂ ಆತ ಮಾತ್ರ ಅಲುಗಾಡದೇ ಕುಳಿತಿದ್ದ ಎನ್ನಲಾಗಿದೆ.
ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ಎನ್ಡಿಆರ್ಎಫ್ ಕೂಡ ಸ್ಥಳಕ್ಕೆ ಧಾವಿಸಿತ್ತು. ಕೊರೆಯುತ್ತಿದ್ದ ಚಳಿಯ ನಡುವೆಯೂ ಆತ ಮಾತ್ರ ಸ್ವೆಟರ್, ಬೆಡ್ಶೀಟ್ ಹೀಗೆ ಏನನ್ನೂ ಧರಿಸದೇ ತಡರಾತ್ರಿಯವರೆಗೂ ವಿದ್ಯುತ್ ಕಂಬದಲ್ಲಿಯೇ ಕುಳಿತಿದ್ದ.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿರುವ ಸ್ಥಳೀಯರು ಆತ ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದು ಈ ರೀತಿ ಅನೇಕ ಬಾರಿ ವಿದ್ಯುತ್ ಕಂಬವನ್ನೇರಿ ಹುಚ್ಚಾಟ ತೋರಿದ್ದಾನೆ ಎಂದು ಹೇಳಿದ್ದಾರೆ.