ಟೆಸ್ಟ್ ಕ್ರಿಕೆಟ್ ಅಂಗಳದಲ್ಲಿ ಈ ವರ್ಷ ಮಿಂಚಿದ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.
2021ರ ಕ್ಯಾಲೆಂಡರ್ ವರ್ಷ ಮುಗಿಯಲು ಇನ್ನೂ ಕೆಲವೇ ದಿನಗಳ ಬಾಕಿ ಇದ್ದು, ಈ ನಿಟ್ಟಿನಲ್ಲಿ ಈ ಪಟ್ಟಿ ಬಿಡುಗಡೆಯಾಗಿದೆ. ಈ ವರ್ಷ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ಅವರು ಈ ವರ್ಷದ ಅವಧಿಯಲ್ಲಿ 14 ಟೆಸ್ಟ್ ಗಳನ್ನು ಆಡಿದ್ದು, 1630 ರನ್ ಗಳನ್ನು ಸಿಡಿಸಿದ್ದಾರೆ. ಒಂದೇ ಪಂದ್ಯದಲ್ಲಿ 228 ಗರಿಷ್ಠ ರನ್ ಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ.
ಭಾರತ ತಂಡದ ಏಕದಿನ ಹಾಗೂ ಟಿ20 ತಂಡದ ನೂತನ ನಾಯಕ ರೋಹಿತ್ ಶರ್ಮಾ 20 ಟೆಸ್ಟ್ ಪಂದ್ಯಗಳಲ್ಲಿ ಆಡಿ 906 ರನ್ ಗಳನ್ನು ಸಿಡಿಸಿದ್ದಾರೆ. ಅಲ್ಲದೇ, ಎರಡು ಶತಕ ಹಾಗೂ ನಾಲ್ಕು ಅರ್ಧ ಶತಕಗಳ ಸಾಧನೆ ಮಾಡಿದ್ದಾರೆ.
ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣಾರತ್ನೆ ಕೇವಲ 7 ಟೆಸ್ಟ್ ಗಳನ್ನು ಆಡಿ 902 ರನ್ ಸಿಡಿಸಿದ್ದಾರೆ. ಇವರ ಬ್ಯಾಟ್ ನಿಂದ ನಾಲ್ಕು ಶತಕ ಹಾಗೂ ಮೂರು ಅರ್ಧ ಶತಕಗಳು ಮೂಡಿ ಬಂದಿವೆ. ಗರಿಷ್ಠ 244 ರನ್ ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.
ಭಾರತ ತಂಡದ ಮತ್ತೋರ್ವ ಆಟಗಾರ ರಿಷಬ್ ಪಂತ್ 11 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 706 ರನ್ ಗಳನ್ನು ದಾಖಲಿಸಿದ್ದಾರೆ. ಪಂತ್ ಒಂದು ಶತಕ ಹಾಗೂ ಐದು ಅರ್ಧ ಶತಕದ ಸಾಧನೆ ಮಾಡಿದ್ದಾರೆ. ಅಲ್ಲದೇ, ಈ ವರ್ಷದ ಅವಧಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.