ನಿಜವಾದ ಮಹಿಳಾ ಸಬಲೀಕರಣ ಅಂದ್ರೆ ಇದು ಅನ್ನುವಂತ ಕ್ರಾತಿಕಾರಿ ನಿರ್ಧಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಿಂದ ಬಂದಿದೆ. ಸಿಆರ್ಪಿಎಫ್ ನ ಮಹಿಳಾ ಕಮಾಂಡೋಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗಾಂಧಿ ಕುಟುಂಬಕ್ಕೆ Z ಪ್ಲಸ್ ಭದ್ರತೆಯನ್ನು ಒದಗಿಸಲು ಸರ್ವ ಸನ್ನದ್ಧರಾಗಿದ್ದಾರೆ.
ವಿವಿಐಪಿ ಭದ್ರತೆಗಾಗಿ ಸಿಆರ್‌ಪಿಎಫ್ ಮಹಿಳಾ ಕಮಾಂಡೋಗಳನ್ನು ನಿಯೋಜಿಸುತ್ತಿರುವುದು ಇದೇ ಮೊದಲು. ಆರಂಭದಲ್ಲಿ ಈ ಮಹಿಳಾ ಕಮಾಂಡೋಗಳನ್ನ ವಿವಿಐಪಿಗಳ ನಿವಾಸದಲ್ಲಿ ನಿಯೋಜಿಸಲಾಗುವುದು. ಈ ಮಹಿಳಾ ಕಮಾಂಡೋಗಳ ಮೊದಲ ಬ್ಯಾಚ್ 32 ಮಹಿಳಾ ಯೋಧರನ್ನು ಒಳಗೊಂಡಿದೆ. ಈಗಾಗ್ಲೇ ಮಹಿಳಾ ಕಮಾಂಡೋಗಳು ತಮ್ಮ 10 ವಾರಗಳ ಸುದೀರ್ಘ ತರಬೇತಿ ಮುಗಿಸಿದ್ದಾರೆ. ಈ ತರಬೇತಿಯಲ್ಲಿ ನಿಶ್ಶಸ್ತ್ರ ಯುದ್ಧ, ದೈಹಿಕ ಸಾಮರ್ಥ್ಯ ಮತ್ತು ವಿಶೇಷ ಶಸ್ತ್ರಾಸ್ತ್ರಗಳ ಫೈರಿಂಗ್ ಅನ್ನು ಪೂರ್ಣಗೊಳಿಸಿದ್ದು ಜನವರಿ 15 ರೊಳಗೆ ರಕ್ಷಣೆ ಕಾರ್ಯಕ್ಕೆ ಹಾಜರಾಗಲಿದ್ದಾರೆ.
ವಿಐಪಿ ಭದ್ರತೆಯ ಎಲ್ಲಾ ಅಂಶಗಳನ್ನು ಒಳಗೊಂಡ ಕಡ್ಡಾಯ ಕೋರ್ಸ್‌ಗೆ ಒಳಗಾದ ಮಹಿಳಾ ಸಿಬ್ಬಂದಿಗಳು, ಮನೆ ರಕ್ಷಣೆಗಾಗಿ ತಮ್ಮ ಕರ್ತವ್ಯಗಳ ಜೊತೆಗೆ ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳಿಗೆ ತಮ್ಮ ಪ್ರಚಾರ ಭೇಟಿಗಳಲ್ಲಿ ವಿವಿಐಪಿಗಳೊಂದಿಗೆ ಹೋಗಬಹುದು ಎಂದು ಮೂಲಗಳು ತಿಳಿಸಿವೆ. ಮಹಿಳಾ ಕಮಾಂಡೋಗಳು, ಮನೆ ರಕ್ಷಣೆಗಾಗಿ ತಮ್ಮ ಕರ್ತವ್ಯಗಳ ಭಾಗವಾಗಿ, ಮಹಿಳಾ ಸಂದರ್ಶಕರನ್ನು ಪರೀಕ್ಷಿಸುತ್ತಾರೆ ಮತ್ತು ಪ್ರವಾಸದ ಸಮಯದಲ್ಲಿ ವಿವಿಐಪಿಗಳ ಒಟ್ಟಾರೆ ಭದ್ರತಾ ವಿವರವನ್ನು ಸೇರುತ್ತಾರೆ