ಚೆನ್ನೈ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮದ್ರಾಸ್ ಹೈಕೋರ್ಟ್‌ನ ವಕೀಲರನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.
ವಕೀಲರಾದ ಆರ್.ಡಿ. ಸಂತಾನ ಕೃಷ್ಣನ್ ಅವರು ತೋರಿದ ಅಸಭ್ಯ ವರ್ತನೆಯಿಂದ ಅವರ ಹೆಸರಿನಲ್ಲಿ ಅಥವಾ ಬೇರೆ ಯಾವುದೇ ಹೆಸರಿನಲ್ಲಿ ಭಾರತದ ಎಲ್ಲಾ ನ್ಯಾಯಾಲಯಗಳು, ನ್ಯಾಯಮಂಡಳಿಗಳು ಮತ್ತು ಇತರ ಪ್ರಾಧಿಕಾರಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುವುದನ್ನು ತಡೆಯಲಾಗಿದೆ.
ಪೋರ್ಟ್‌ಫೋಲಿಯೋ ನ್ಯಾಯಾಧೀಶರಾದ ಪಿ.ಎನ್. ಪ್ರಕಾಶ್ ಮತ್ತು ಆರ್. ಹೇಮಲತಾ ಅವರು ಸಂತಾನ ಕೃಷ್ಣನ್ ವಿರುದ್ಧ ಸ್ವಯಂ ಮೊಕದ್ದಮೆ ದಾಖಲಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕೂಲಂಕುಷವಾಗಿ ತನಿಖೆ ನಡೆಸಿ ಡಿಸೆಂಬರ್ 23ರಂದು ವರದಿ ಸಲ್ಲಿಸುವಂತೆ ಸಿಬಿ ಸಿಐಡಿ ಪೊಲೀಸರಿಗೆ ಆದೇಶಿಸಲಾಗಿತ್ತು.
ನ್ಯಾಯಾಲಯದ ಕಲಾಪ ವಿಡಿಯೋ ಕಾನ್ಪ್ ರೆನ್ಸ್ ಮೂಲಕ ನಡೆಯುತ್ತಿರುವಾಗಲೇ ಮಹಿಳೆಯೊಂದಿಗೆ ಆಪ್ತ ಭಂಗಿಯಲ್ಲಿದ್ದ ವಕೀಲರ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕ್ಲಿಪ್ಪಿಂಗ್ ಪ್ರಸಾರವಾಗದಂತೆ ಕ್ರಮಕೈಗೊಳ್ಳಲು ನಗರ ಪೊಲೀಸ್ ಆಯುಕ್ತರಿಗೆ ಕೋರ್ಟ್ ಆದೇಶಿಸಿದೆ.