ವಿಶ್ವ ಟೆಸ್ಟ್ ಕ್ರಿಕೆಟ್ ನ ಶ್ರೇಯಾಂಕ ಬಿಡುಗಡೆಯಾಗಿದ್ದು, ಬೌಲರ್ ಆರ್. ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಿಟ್ ಮ್ಯಾನ್ ಮೊದಲಿನ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಆದರೆ, ಕಿಂಗ್ ಕೊಹ್ಲಿ ಮಾತ್ರ ಪಟ್ಟಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ, ಶ್ರೇಯಾಂಕದ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ ಕೊಹ್ಲಿ 6ನೇ ಸ್ಥಾನದಲ್ಲಿದ್ದರು. ಭಾರತದ ಹಿಟ್ ಮ್ಯಾನ್ ಎಂದೇ ಖ್ಯಾತಿಯಾಗಿರುವ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ.
ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್ ಚಾಗ್ನೆ ಮೊದಲ ಸ್ಥಾನದಲ್ಲಿದ್ದಾರೆ. ಈ ಮೊದಲು ಈ ಆಟಗಾರ ನಾಲ್ಕನೇ ಸ್ಥಾನದಲ್ಲಿದ್ದರು. ಆದರೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಕೊಹ್ಲಿ ಹಾಗೂ ಲ್ಯಾಬುಸ್ ಚಾಗ್ನೆ ಹೊರತು ಪಡಿಸಿದರೆ ಬಹುತೇಕರು ಕಳೆದ ಬಾರಿಯ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ.
ಬೌಲರ್ ಗಳ ಪಟ್ಟಿಯಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ನಂತರದ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಉತ್ತಮ ಬೌಲಿಂಗ್ ದಾಳಿ ನಡೆಸಿರುವ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅಗ್ರ 10ರೊಳಗೆ ಲಗ್ಗೆಯಿಟ್ಟಿದ್ದಾರೆ.