ತವರು ಮನೆಗೆ ಭೇಟಿ ಹೋಗಲು ಒತ್ತಾಯ ಮಾಡಿದ್ದಕ್ಕೆ ಕೋಪಗೊಂಡ ಪತಿಯು ತನ್ನ ಪತ್ನಿಯ ಕತ್ತನ್ನೇ ಸೀಳಿದ ಬೆಚ್ಚಿಬೀಳಿಸುವ ಘಟನೆಯು ಉತ್ತರ ಪ್ರದೇಶದ ಸಹರಾನ್ಪುರದ ತೆಲಿಪುರಾ ಎಂಬಲ್ಲಿ ನಡೆದಿದೆ.
ಕೊಲೆಗೈದ ಆರೋಪಿಯನ್ನು ಕಲೀಂ ಅಲಿ ಎಂದು ಗುರುತಿಸಲಾಗಿದೆ. ಮೃತ ಶಮಾ(22) ಹಾಗೂ ಕಲೀಂ ಎರಡು ವರ್ಷಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಪತ್ನಿ ಶಮಾ ಪದೆ ಪದೇ ತವರು ಮನೆಗೆ ಭೇಟಿ ನೀಡುತ್ತಿದ್ದುದ್ದರಿಂದ ಕಲೀಂ ಕೋಪಗೊಂಡಿದ್ದ ಎನ್ನಲಾಗಿದೆ.
ಶಮಾಳ ಸಹೋದರರೂ ಸಹ ಆಕೆಗೆ ತವರು ಮನೆಗೆ ತೆರಳಲು ಅಡ್ಡಿ ಮಾಡದಂತೆ ಕಲೀಂಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಕಲೀಂ ಹಾಗೂ ಶಮಾ ಸಹೋದರರ ನಡುವೆ ದೊಡ್ಡ ವಾಗ್ವಾದವೇ ನಡೆದಿತ್ತು.
ಇದಾದ ಬಳಿಕ ಮಂಗಳವಾರದಂದು ನೆರೆಹೊರೆಯವರಿಗೆ ಶಮಾ ಜೋರಾಗಿ ಅಳುತ್ತಿರುವ ಸದ್ದು ಕೇಳಿದೆ. ಇದಾದ ಬಳಿಕ ಶಮಾ ಜೋರಾಗಿ ಕಿರುಚಿದ್ದಾಳೆ. ಇದರಿಂದ ಗಾಬರಿಗೊಂಡ ನೆರೆಹೊರೆಯವರು ಕೂಡಲೇ ಕಲೀಂ ಮನೆ ಬಾಗಿಲನ್ನು ಬಡಿದಿದ್ದಾರೆ. ಆದರೆ ಯಾರೂ ಬಾಗಿಲು ತೆರೆಯಲಿಲ್ಲ.
ಕೆಲ ಸಮಯದ ಬಳಿಕ ನೆರೆಹೊರೆಯವರು ಕಲೀಂ ಮನೆಯಿಂದ ಹೊರಬಂದಿದ್ದನ್ನು ಕಂಡಿದ್ದಾರೆ.
ಪ್ರತ್ಯಕ್ಷದರ್ಶಿ ನೀಡಿರುವ ಮಾಹಿತಿಯ ಪ್ರಕಾರ ಕಲೀಂ ಮನೆಯಿಂದ ಹೊರಬರುವ ವೇಳೆಯಲ್ಲಿ ಈಗ ನಿನ್ನ ತವರು ಮನೆಯವರು ಎಲ್ಲಿದ್ದಾರೆ ಎಂದು ಗೊಣಗಿದ್ದ ಎನ್ನಲಾಗಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಕಲೀಂ ವಿರುದ್ಧ ಕೊಲೆ ಹಾಗೂ ವರದಕ್ಷಿಣೆಗೆ ಪೀಡಿಸಿದ ಆರೋಪವನ್ನು ದಾಖಲಿಸಲಾಗಿದೆ.