ಢಾಕಾ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಮೆಂಟ್ನಲ್ಲಿ ಬುಧವಾರ ನಡೆದ ಮೂರನೇ-ನಾಲ್ಕನೇ ಸ್ಥಾನದ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-3 ಗೋಲುಗಳಿಂದ ಸೋಲಿಸುವ ಭಾರತ ಕಂಚಿನ ಪದಕ ಗಳಿಸಿದೆ.
ರೌಂಡ್-ರಾಬಿನ್ ಹಂತಗಳಲ್ಲಿ ಅಗ್ರಸ್ಥಾನ ಪಡೆದ ನಂತರ, ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ತಂಡ ಟೂರ್ನಿಯಲ್ಲಿ ಕೊನೆಯ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಮನ್ಪ್ರೀತ್ ಸಿಂಗ್ ನೇತೃತ್ವದ ತಂಡವು ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ.
ಮಂಗಳವಾರ ನಡೆದ ಸೆಮಿಫೈನಲ್ನಲ್ಲಿ ಜಪಾನ್ನಿಂದ 3-5 ಗೋಲುಗಳಿಂದ ಆಘಾತಕ್ಕೊಳಗಾದ ನಂತರ, ಪಾಕಿಸ್ತಾನದ ವಿರುದ್ಧ ದಿಟ್ಟ ಪ್ರದರ್ಶನ ನಿರೀಕ್ಷಿಸಲಾಗಿತ್ತು.
ಭಾರತ ತಂಡದ ಉಪನಾಯಕ ಹರ್ಮನ್ಪ್ರೀತ್ ಸಿಂಗ್ ಮೊದಲು ಮುನ್ನಡೆ ಸಾಧಿಸಿದ್ದು, ಸುಮಿತ್(45ನೇ), ವರುಣ್ ಕುಮಾರ್(53ನೇ) ಮತ್ತು ಆಕಾಶದೀಪ್ ಸಿಂಗ್ (57ನೇ) ತಲಾ ಒಂದು ಗೋಲು ಬಾರಿಸಿದರು.
ಪಾಕಿಸ್ತಾನದ ಗೋಲುಗಳನ್ನು ಅಫ್ರಾಜ್(10ನೇ), ಅಬ್ದುಲ್ ರಾಣಾ (33ನೇ) ಮತ್ತು ಅಹ್ಮದ್ ನದೀಮ್ (57ನೇ ನಿ) ಗಳಿಸಿದರು. ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಇದು ಎರಡನೇ ಗೆಲುವಾಗಿದೆ.