ಹರಿಯಾಣದ ಗುರುಗಾಂವ್ ನಿವಾಸಿ ಯುವತಿಯೊಬ್ಬರು ದೆಹಲಿಯಲ್ಲಿ ಆಟೋರಿಕ್ಷಾ ಚಾಲಕನ ತನ್ನನ್ನು ಅಪಹರಿಸಲು ಯತ್ನಿಸಿದ ಬಗ್ಗೆ ಟ್ವಿಟರ್ನಲ್ಲಿ ಸುದೀರ್ಘವಾಗಿ ಬರೆದಿದ್ದಾರೆ. ಆಟೋರಿಕ್ಷಾ ಚಾಲಕನಿಂದ ಬಚಾವಾಗಲು ನಾನು ಚಲಿಸುತ್ತಿರುವ ಆಟೋದಿಂದ ಜಿಗಿದಿದ್ದೆ. ನನ್ನ ಮನೆಯಿಂದ ಕೇವಲ 7 ನಿಮಿಷ ದೂರದಲ್ಲಿರುವ ಗುರುಗಾಂವ್ ಸೆಕ್ಟರ್ 22ರಲ್ಲಿ ಈ ಘಟನೆ ನಡೆದಿದೆ ಎಂದು ಯುವತಿ ಟ್ವೀಟಾಯಿಸಿದ್ದಾರೆ.
ಟ್ವಿಟರ್ನಲ್ಲಿ ನಿಶಿತಾ ಎಂಬ ಹೆಸರನ್ನು ಹೊಂದಿರುವ ಯುವತಿಯು ದೆಹಲಿಯಲ್ಲಿ ತಾವು ಅನುಭವಿಸಿದ ಕಷ್ಟವನ್ನು ಟ್ವೀಟ್ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಟೋರಿಕ್ಷಾ ಚಾಲಕ ಉದ್ದೇಶಪೂರ್ವಕವಾಗಿ ನನ್ನನ್ನು ಅಪರಿಚಿತ ರಸ್ತೆಯ ಕಡೆಗೆ ಕೊಂಡೊಯ್ದಿದ್ದ. ನಾನು ಕೂಗಿದೆ. ಪ್ರತಿಭಟಿಸಿದೆ. ಆದರೆ ಆತ ಇದ್ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ ಎಂದು ಬರೆದುಕೊಂಡಿದ್ದಾರೆ.
ನನ್ನ ಜೀವನದ ಅತ್ಯಂತ ಭಯಾನಕ ದಿನಗಳ ಪೈಕಿ ಈ ದಿನವೂ ಒಂದಾಗಿದೆ. ನಾನು ಬಹುತೇಕ ಅಪಹರಣ ಆಗುವವಳಿದ್ದೆ. ನನಗೆ ಅಲ್ಲಿ ಏನು ನಡೆಯಿತು ಎಂದು ನಿಜಕ್ಕೂ ಅರ್ಥವಾಗುತ್ತಿಲ್ಲ. ಆದರೆ ಆ ಘಟನೆಗಳನ್ನು ನೆನೆಸಿಕೊಂಡರೆ ನನಗೆ ಈಗಲೂ ನಡುಕ ಬರುತ್ತದೆ. ನಾನು ಮಧ್ಯಾಹ್ನ 12: 30ಕ್ಕೆ ಆಟೋ ನಿಲ್ದಾಣದಿಂದ ಆಟೋವನ್ನು ಹತ್ತಿದೆ. ಕೇವಲ 7 ನಿಮಿಷದ ಸಂಚಾರದ ಮೂಲಕ ನಾನು ಮನೆಯನ್ನು ತಲುಪುವವಳಿದ್ದೆ.
ನನ್ನ ಬಳಿ ಹಣವಿಲ್ಲದ ಕಾರಣ ಪೇಟಿಎಂ ಮಾಡುತ್ತೇನೆ ಎಂದು ನಾನು ಆಟೋ ಚಾಲಕನಿಗೆ ಹೇಳಿದ್ದೆ. ಇದಕ್ಕೆ ಒಪ್ಪಿದ ಚಾಲಕ ಆಟೋ ಓಡಿಸಲು ಆರಂಭಿಸಿದ. ಆತ ಹಾಡು ಕೇಳುತ್ತಾ ಗಾಡಿ ಚಲಾಯಿಸುತ್ತಿದ್ದ.
ಆದರೆ ಆತ ಎಲ್ಲಿ ಬಲ ತಿರುವು ತೆಗೆದುಕೊಳ್ಳಬೇಕಿತ್ತೋ ಅಲ್ಲಿ ಎಡ ತಿರುವು ತೆಗೆದುಕೊಂಡಿಲ್ಲ. ಯಾಕೆ ಎಂದು ಕೇಳಿದ್ದಕ್ಕೆ ಆತ ಉತ್ತರಿಸಲಿಲ್ಲ. ಬದಲಾಗಿ ದೇವರ ಹೆಸರನ್ನು ಜೋರಾಗಿ ಹೇಳಲು ಆರಂಭಿಸಿದ ಎಂದು ನಿಶಿತಾ ಟ್ವೀಟ್ ಮಾಡಿದ್ದಾರೆ.
ನಾನು ಆತನ ಎಡ ಭಾಗದ ಭುಜಕ್ಕೆ 8-10 ಬಾರಿ ತಟ್ಟಿದೆ. ಆದರೆ ಆತ ಪ್ರತಿಕ್ರಿಯೆಯನ್ನೇ ನೀಡುತ್ತಿರಲಿಲ್ಲ. ಈ ಸಮಯದಲ್ಲಿ ನನ್ನ ತಲೆಯಲ್ಲಿ ಬಂದ ಆಲೋಚನೆ ಒಂದೇ ಆಟೋದಿಂದ ಜಿಗಿಯುವುದು..! ನನಗೆ ಮೂಳೆ ಮುರಿದರೂ ಅಡ್ಡಿಲ್ಲ ಅಲ್ಲಿಂದ ತಪ್ಪಿಸಿಕೊಂಡರೆ ಸಾಕಿತ್ತು. ಹೀಗಾಗಿ ನಾನು ಆಟೋದಿಂದ ಜಿಗಿದೆ. ನನಗೆ ಎಲ್ಲಿಂದ ಆ ಧೈರ್ಯ ಬಂತೋ ತಿಳಿದಿಲ್ಲ ಎಂದು ಬರೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆಟೋ ಚಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.