ಮೀರತ್: ಉತ್ತರ ಪ್ರದೇಶದಿಂದ ವರದಿಯಾಗಿರುವ ಭಯಾನಕ ಅಪರಾಧ ಪ್ರಕರಣವೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿದ 50 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ವಿಫಲರಾದ ವ್ಯಕ್ತಿಯೊಬ್ಬ ಕೊಡಲಿಯಿಂದ ಆಕೆಯ ಕತ್ತು ಸೀಳಿದ್ದಾನೆ.
ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಜಹಾಂಗೀರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಭೋಪುರ ಗ್ರಾಮದಲ್ಲಿ ಘಟನೆ ನಡೆದಿದೆ. ದಲಿತ ಮಹಿಳೆ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೊಲಕ್ಕೆ ಹೋಗಿದ್ದರು. ಆಕೆ ಒಬ್ಬಳೇ ಇದ್ದುದನ್ನು ಕಂಡು ಅದೇ ಗ್ರಾಮದ ಲಲಿತ್ ಚೌಧರಿ ಎಂಬಾತ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಆತನಿಂದ ಬಿಡಿಸಿಕೊಳ್ಳಲು ಮಹಿಳೆ ಹೋರಾಟ ಮಾಡಿದ್ದಾಳೆ. ಚೌಧರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ವಿಫಲನಾದ ನಂತರ ಕೊಡಲಿಯಿಂದ ಆಕೆಯ ಕತ್ತಿನ ಭಾಗಕ್ಕೆ ಹೊಡೆದಿದ್ದಾನೆ ಎಂದು ಬುಲಂದ್ ಶಹರ್ ಎಸ್ಎಸ್ಪಿ ಸಂತೋಷ್ ಸಿಂಗ್ ಹೇಳಿದ್ದಾರೆ.
ಮಹಿಳೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಮಗನಿಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾಳೆ.
ಆರೋಪಿ ಸದ್ಯ ಜೈಲಿನಲ್ಲಿದ್ದಾನೆ. ಆರಂಭದಲ್ಲಿ ಆತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದೀಗ, ಮಹಿಳೆ ಸಾವನ್ನಪ್ಪಿರುವುದರಿಂದ ಕೊಲೆ ಆರೋಪ ಸೇರಿಸಲಾಗುವುದು.