ಬೆಳಗಾವಿ(ಸುವರ್ಣಸೌಧ): ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿಂದು ಮಹತ್ವದ ಚರ್ಚೆ ನಡೆಯಲಿದ್ದು, ವಿಧಾನಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಬಿಜೆಪಿಯಿಂದ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ವಿಧಾನಪರಿಷತ್ತಿನಲ್ಲಿಯೂ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದ್ದು, ಎರಡೂ ಸದನಗಳಲ್ಲಿ ಇಂದು ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ.
ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಿದೆ. ನಿನ್ನೆ ವಿರೋಧದ ನಡುವೆಯೂ ವಿಧೇಯಕವನ್ನು ಮಂಡಿಸಲಾಗಿದೆ. ವಿಧೇಯಕದ ಬಗ್ಗೆ ಇಂದು ಚರ್ಚೆಗೆ ಅವಕಾಶ ನೀಡಲಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.
ಕಾಂಗ್ರೆಸ್ ಪ್ರತಿರೋಧದ ನಡುವೆಯೂ ನಿನ್ನೆ ವಿಧಾನಸಭೆಯಲ್ಲಿ ಬಿಲ್ ಮಂಡನೆಯಾಗಿದೆ. ಜೆಡಿಎಸ್ ಕೂಡ ಮತಾಂತರ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದು, ಇಂದು ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ತಿಳಿಸಿದ್ದಾರೆ. ಇದು ಆರ್.ಎಸ್.ಎಸ್. ಅಜೆಂಡಾ ಆಗಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಇಂದು ಸದನದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ.