ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯ 144 ವಾರ್ಡ್ ಗಳ ಪೈಕಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬರೋಬ್ಬರಿ 134 ಸ್ಥಾನಗಳನ್ನು ಗೆದ್ದು ಬೀಗಿದೆ.
ಈ ಚುನಾವಣೆಯಲ್ಲಿ ಬಿಜೆಪಿ ಕೇವಲ ಮೂರರಲ್ಲಿ ಮಾತ್ರ ಜಯ ಸಾಧಿಸಿದೆ. ಇನ್ನುಳಿದಂತೆ ಪಕ್ಷೇತರರು ಮೂರು, ಕಾಂಗ್ರೆಸ್, ಸಿಪಿಐ(ಎಂ) ನೇತೃತ್ವದ ಎಡರಂಗ ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ಈ ಚುನಾವಣೆಯಲ್ಲಿ ದಾಖಲಾದ ಮತಗಳ ಪೈಕಿ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಶೇ.72ರಷ್ಟು ಮತಗಳನ್ನು ಬಾಚಿಕೊಂಡಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ್ದೇ ಪಾರುಪತ್ಯ ಎನ್ನುವಂತಾಗಿದೆ. ಬಿಜೆಪಿ ಪಕ್ಷವು ಶೇ.8.94, ಕಾಂಗ್ರೆಸ್ ಶೇ.4.47 ಹಾಗೂ ಎಡರಂಗದ ಪಕ್ಷಗಳು ಶೇ.8.94ರಷ್ಟು ಮತಗಳನ್ನು ಬಾಚಿಕೊಂಡಿವೆ.
ಗೆಲುವಿನ ನಂತರ ಟ್ವಿಟ್ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ, ನಮ್ಮ ಗುರಿಗಳೊಂದಿಗೆ ನಾವು ಹೆಜ್ಜೆ ಹಾಕುತ್ತೇವೆ. ಜನರ ಪ್ರಗತಿಯತ್ತ ನಮ್ಮ ಗುರಿ ಇರುತ್ತದೆ. ಜನಾದೇಶಕ್ಕೆ ನಾವು ವಿನಮ್ರರಾಗಿದ್ದೇವೆ. ಪಕ್ಷಕ್ಕೆ ಆಶೀರ್ವಾದ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇದರ ಬೆನ್ನಲ್ಲಿಯೇ ಟ್ವಿಟ್ ಮಾಡಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಶಾಂತಿಯುತವಾಗಿ ಮತದಾನ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದ, ಸಿಎಂ ಮಮತಾ ಬ್ಯಾನರ್ಜಿಯವರೇ ತಮ್ಮ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.