ಅರಬ್ ರಾಷ್ಟ್ರಗಳ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಗೆ ಮಾಜಿ ಪತ್ನಿ ಹಯಾ ಬಿಂತ್ ಅಲ್ ಹುಸೇನ್ರಿಗೆ 728 ಮಿಲಿಯನ್ ಡಾಲರ್ (5,473 ಕೋಟಿ ರೂ.) ಹಣವನ್ನು ವಿಚ್ಚೇದನದ ಪರಿಹಾರ ರೂಪದಲ್ಲಿ ಪಾವತಿಸುವಂತೆ ಬ್ರಿಟನ್ನ ನ್ಯಾಯಾಲಯವು ಆದೇಶ ನೀಡಿದೆ.
ಹಯಾ ಅವರ ಉಳಿದ ಜೀವನದ ಅವಧಿಗೆ ಭದ್ರತಾ ವೆಚ್ಚವಾಗಿ ಹಾಗೂ ದಂಪತಿಯ ಇಬ್ಬರು ಮಕ್ಕಳ ವೆಚ್ಚವನ್ನು ಭರಿಸಲು ಈ ಹಣವನ್ನು ಬಳಸುವಂತೆ ಕೋರ್ಟ್ ಸೂಚನೆ ನೀಡಿದೆ.
ಒಟ್ಟು ಇತ್ಯರ್ಥಕ್ಕೆ ಯಾವುದೇ ಸ್ಥಿರ ಮೌಲ್ಯವಿಲ್ಲ, ಏಕೆಂದರೆ ಶೇಖ್ ಮೊಹಮ್ಮದ್ ತನ್ನ 9 ಮತ್ತು 14 ವರ್ಷ ವಯಸ್ಸಿನ ಇಬ್ಬರು ಮಕ್ಕಳಿಗೆ ವಾರ್ಷಿಕ ಭದ್ರತಾ ವೆಚ್ಚವನ್ನು ಅವರ ಜೀವಿತಾವಧಿಯವರೆಗೆ ಅಥವಾ ಮುಂದಿನ ನ್ಯಾಯಾಲಯದ ಆದೇಶವನ್ನು ನೀಡುವವರೆಗೆ ಪಾವತಿಸಬೇಕು ಎಂದು ತೀರ್ಪು ನೀಡಿದೆ.
ಈ ಸಂಬಂಧ ಲಿಖಿತ ತೀರ್ಪು ಪ್ರಕಟಿಸಿದ ಬ್ರಿಟನ್ನ ನ್ಯಾಯಾಲಯವು ರಾಜಕುಮಾರಿ ಹಯಾ ಹಾಗೂ ಅವರ ಮಕ್ಕಳಾದ ಜಲೀಲಾ ಮತ್ತು ಜಾಯೇದ್ಗೆ ದೊಡ್ಡ ಬೆದರಿಕೆಯೇ ಶೇಖ್ ಮೊಹಮ್ಮದ್ ಹೊರತು ಇನ್ಯಾರೂ ಅಲ್ಲ ಎಂದು ಹೇಳಿದೆ.
ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿದ ನ್ಯಾಯಾಲಯವು, ಹಯಾ ಬಿಂತ್ ಅಲ್ ಹುಸೇನ್ರಿಗೆ ಬರೋಬ್ಬರಿ 728 ಮಿಲಿಯನ್ ಡಾಲರ್ ಪಾವತಿಸುವಂತೆ ಹೇಳಿದೆ. ಅಂದಹಾಗೆ ಇದು ಬ್ರಿಟನ್ನಲ್ಲಿ ಈವರೆಗೆ ನೀಡಲಾದ ಅತಿ ದೊಡ್ಡ ವಿಚ್ಚೇದನ ಪರಿಹಾರದ ಮೊತ್ತ ಎಂದು ವ್ಯಾಖ್ಯಾನಿಸಲಾಗಿದೆ.