ಭೋಪಾಲ್: ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ಚಿನ್ನ, ಆಸ್ತಿ ಮುಂತಾದ ದೊಡ್ಡ ಉಡುಗೊರೆಗಳನ್ನು ಶ್ರೀಮಂತ ಪೋಷಕರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತನ್ನ ಮಗನ ಎರಡನೇ ವರ್ಷದ ಹುಟ್ಟುಹಬ್ಬಕ್ಕೆ ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮಧ್ಯಪ್ರದೇಶದ ಸಾತ್ನಾದ ಅಭಿಲಾಷ್ ಮಿಶ್ರಾ ಅವರು ಈ ಉಡುಗೊರೆ ನೀಡಿದವರು. ಸದ್ಯ, ಬೆಂಗಳೂರಿನ ಖಾಸಗಿ ಹಣಕಾಸು ಕಂಪನಿಯೊಂದರಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಅವರು ತಮ್ಮ ಪುತ್ರನಿಗೆ ವಿಶೇಷ ಉಡುಗೊರೆ ನೀಡಿ ಸುದ್ದಿಯಾಗಿದ್ದಾರೆ. ತಮ್ಮ ಪುತ್ರ ಅವ್ಯಾನ್ ಮಿಶ್ರಾ ಜನ್ಮದಿನವನ್ನು ಮತ್ತಷ್ಟು ವಿಶೇಷವಾಗಿಸಬೇಕು ಎಂದುಕೊಂಡ ಅವರು, ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದ್ದಾರೆ. ಇದಕ್ಕಾಗಿ ಅವರು 1 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ.
ಮಿಶ್ರಾ ಅವರು, ವಿಂಧ್ಯಾ ಪ್ರದೇಶದ ಸತ್ನಾ ಜಿಲ್ಲೆಯಿಂದ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದಕ್ಕಾಗಿ ಅವರು ಯುಎಸ್ಎಯ ನ್ಯೂಯಾರ್ಕ್ನಲ್ಲಿರುವ ಇಂಟರ್ನ್ಯಾಷನಲ್ ಲೂನಾರ್ ರಿಜಿಸ್ಟ್ರಿಯನ್ನು ಸಂಪರ್ಕಿಸಿದ್ದರು. ಅವರಿಂದ ಅನುಮೋದನೆ ಪಡೆದ ನಂತರ, ಅಗತ್ಯವಿರುವ ಎಲ್ಲಾ ದಾಖಲೆಗಳು ಮತ್ತು ಶುಲ್ಕಗಳನ್ನು ಸಲ್ಲಿಸಿದ್ದಾರೆ. ನಂತರ, ಅವರು ಕಂಪನಿಯಿಂದ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಒಂದು ಎಕರೆ ಜಮೀನಿನ ಮಾಲೀಕತ್ವದೊಂದಿಗೆ, ಅವರಿಗೆ ಚಂದ್ರನ ಮೇಲಿನ ಪೌರತ್ವವನ್ನು ಕೂಡ ನೀಡಲಾಗಿದೆ.