ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ.
ಗಡಿ ವಿವಾದದಲ್ಲಿ ಮಹಾಜನ ವರದಿಯೇ ಅಂತಿಮವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ. ಬೆಳಗಾವಿಯಲ್ಲಿನ ಎಂಇಎಸ್ ಕೃತ್ಯ ಖಂಡಿಸಿ ವಿಧಾನಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ. ಎಂಇಎಸ್ ವಿರುದ್ಧ ಸರ್ವಾನುಮತದ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ.
ಎಂಇಎಸ್ ಸಂಘಟನೆಯನ್ನು ನಿಷೇಧಿಸುವ ಬಗ್ಗೆಯೂ ಚರ್ಚೆ ನಡೆದು, ಕಾನೂನಿನಲ್ಲಿ ಅವಕಾಶವಿದ್ದರೆ ಬ್ಯಾನ್ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಸುವರ್ಣ ಸೌಧದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಚೆನ್ನಮ್ಮನ ಪ್ರತಿಮೆ ನಿರ್ಮಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಎಂಇಎಸ್ ಪುಂಡಾಟಿಕೆ ವಿರುದ್ಧ ದೇಶದ್ರೋಹ ಮತ್ತು ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಲಾಗುವುದು. ನಾವು ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ಕೇಸ್ ಹಾಕಿ ಅವರ ಹಿನ್ನೆಲೆಯನ್ನು ತೆಗೆಯುತ್ತೇವೆ ಎಂದು ಬೊಮ್ಮಾಯಿ ಗುಡುಗಿದ್ದಾರೆ.