ಬೆಂಗಳೂರು: ಕರ್ನಾಟಕದಲ್ಲಿ ಮರಾಠಿ ಮಾತನಾಡುವವರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಘಟನೆ ಬಗ್ಗೆ ಮಧ್ಯ ಪ್ರವೇಶ ಮಾಡುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಪ್ರಧಾನಿ ಮೋದಿಯವರನ್ನು ಒತ್ತಾಯಿಸಿರುವ ಬೆನ್ನಲ್ಲೇ ಕಿಡಿಕಾರಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಉದ್ಧವ್ ಠಾಕ್ರೆಯೇನು ಆಕಾಶದಿಂದ ಇಳಿದು ಬಂದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಮೇರೆ ಮೀರಿದ್ದು, ಮಹಾ ಸಿಎಂ ಉದ್ಧವ್ ಠಾಕ್ರೆ ಎಂಇಎಸ್ ಸಮರ್ಥಿಸಿಕೊಂಡು ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣವನ್ನು ಉಲ್ಲೇಖಿಸಿದ್ದು, ದೇಶಾದ್ಯಂತ ಪೂಜಿಸಲ್ಪಡುವ ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಮಾಡಲಾಗಿರುವ ಅವಮಾನ ಸಹಿಸಲ್ಲ. ಘಟನೆಯ ಸಂಪೂರ್ಣ ತನಿಖೆ ನಡೆಸಬೇಕು ಹಾಗೂ ಬೆಳಗಾವಿ ಗಡಿಯಲ್ಲಿ ಮರಾಠಿ ಭಾಷಿಕರು ವರ್ಷದಿಂದ ಅನುಭವಿಸುತ್ತಿರುವ ದೌರ್ಜನ್ಯ ತಡೆಯಬೇಕು. ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಕರ್ನಾಟಕ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ. ಈ ಘಟನೆಗಳ ಬಗ್ಗೆ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
ಬ್ರಿಟನ್ ನಲ್ಲಿ ಓಮಿಕ್ರಾನ್ ಹಾವಳಿ: ಕ್ರಿಸ್ ಮಸ್ ಬಳಿಕ ಲಾಕ್ ಡೌನ್ ಘೋಷಣೆಗೆ ಸಿದ್ದತೆ
ಮಹಾ ಸಿಎಂ ಟ್ವೀಟ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಈಶ್ವರಪ್ಪ, ಉದ್ಧವ್ ಠಾಕ್ರೆ ಆಕಾಶದಿಂದ ಇಳಿದು ಬಂದಿಲ್ಲ….. ಪ್ರಧಾನಿ ಮೋದಿ ಈ ಬಗ್ಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಮಹಾ ಸಿಎಂ ಟ್ವೀಟ್ ಗೆ ಉತ್ತರ ನೀಡಲಿ ಎಂದಿದ್ದಾರೆ.
ನೆಲ, ಜಲ, ಭಾಷೆ, ಮಹಾ ಪುರುಷರ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಕಾಂಗ್ರೆಸ್ ನಾಯಕರು ಉದ್ಧವ್ ಠಾಕ್ರೆ ಹೇಳಿಕೆ ಬಗ್ಗೆ ಮಾತನಾಡಲಿ ಎಂದು ಗುಡುಗಿದ್ದಾರೆ.