ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕಾರು ಮಾಲೀಕರೊಬ್ಬರು ತನ್ನ ವಾಹನವನ್ನು ನೋಡಿ ಶಾಕ್ ಆಗಿದ್ದಾರೆ. ಎಂದಿನಂತೆ ನಿಲುಗಡೆ ಮಾಡಲಾಗಿದ್ದ ತಮ್ಮ ಕಾರಿಗೆ ದುಷ್ಕರ್ಮಿಗಳು ಹಾನಿಯೆಸಗಿದ್ದಾರೆಂದುಕೊಂಡಿದ್ದಾರೆ. ಧ್ವಂಸಗೊಂಡ ಕಾರಿನ ವಿಡಿಯೋ ಮಾಡಿದ ಅವರಿಗೆ ಇದು ಕಿಡಿಗೇಡಿಗಳ ಕೃತ್ಯವಲ್ಲ ಎಂಬುದು ಗೊತ್ತಾಗಿದೆ. ಅಷ್ಟಕ್ಕೂ ಕಾರಿಗೆ ಹಾನಿ ಮಾಡಿದವರು ಬೇರೆ ಯಾರೂ ಅಲ್ಲ ಕರಡಿ ಮರಿಗಳು..!
ಜೆನ್ನಿ ಕೇ ಎಂಬುವವರ ಸೆಡಾನ್ನ ಸೀಟುಗಳು ಹರಿದುಹೋಗಿದ್ದವು. ಅಲ್ಲದೆ ಕಾರಿನ ಒಳಭಾಗಗಳು ಸಂಪೂರ್ಣವಾಗಿ ಹಾನಿಯಾಗಿರುವುದನ್ನು ಆಕೆ ಕಂಡುಕೊಂಡಳು. ವರದಿಯ ಪ್ರಕಾರ, 2 ಕರಡಿ ಮರಿಗಳು ಕಾರಿನ ಒಳಗೆ ಹೋಗಿದ್ದು, ನಂತರ ಅಲ್ಲೇ ಸಿಕ್ಕಿಹಾಕಿಕೊಂಡಿವೆ. ಇದರಿಂದ ಹೆದರಿದ ಕರಡಿ ಮರಿಗಳು ಕಾರಿನ ಹಾರ್ನ್ ಕೂಡ ಬಾರಿಸಿದೆ. ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕಾರಿನಿಂದ ಕರಡಿಗಳ ಮರಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ವೇಳೆ ಎಲ್ಲರೂ ಮಲಗಿದ್ದ ಸಮಯದಲ್ಲಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಸ್ಥಿರವಾಗಿ ಕಾರಿನಿಂದ ಹಾರ್ನ್ ಕೇಳಿಸಿದೆ. ಇದರಿಂದ ಎಚ್ಚರಗೊಂಡ ನೆರೆಹೊರೆಯವರು ಪರೀಕ್ಷಿಸಲು ಬಂದಾಗ ಕರಡಿಮರಿಗಳಿರುವುದನ್ನು ಕಂಡುಕೊಂಡಿದ್ದಾರೆ.
ಇನ್ನು ಕಾರಿನ ಮಾಲಕಿಗೆ ಮರಿಗಳು ಅದು ಹೇಗೆ ಕಾರಿನೊಳಗೆ ಪ್ರವೇಶ ಪಡೆದಿದ್ದವು ಎಂಬ ಬಗ್ಗೆ ಇನ್ನೂ ಅರ್ಥ ಆಗಿಲ್ಲ. ಯಾಕೆಂದ್ರೆ, ಅವಳು ತನ್ನ ಕಾರಿಗೆ ಸರಿಯಾಗಿ ಲಾಕ್ ಮಾಡಿದ್ದಳು. ಆದರೂ, ಕರಡಿ ಮರಿಗಳು ಅದು ಹೇಗೆ ಪ್ರವೇಶಿಸಿದವು ಎಂಬುದೇ ಅಚ್ಚರಿಗೆ ಕಾರಣವಾಗಿದೆ.