ಗ್ವಾಲಿಯರ್: ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಗ್ವಾಲಿಯರ್ನ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಸುದ್ದಿಯಾಗಿದ್ದಾರೆ.
ಶಾಲೆಯಲ್ಲಿನ ಕೊಳಕು ಶೌಚಾಲಯಗಳ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ ನಂತರ ತಾನು ಈ ಹೆಜ್ಜೆ ಇಡಲು ನಿರ್ಧರಿಸಿದ್ದಾಗಿ ತೋಮರ್ ಹೇಳಿದ್ದಾರೆ.
ಶಾಲೆಯ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ದೂರಿದ್ದಳು. ಹೀಗಾಗಿ ಸ್ವತಃ ಸಚಿವರು, ಅಧಿಕಾರಿಗಳೊಂದಿಗೆ ಸರ್ಕಾರಿ ಶಾಲೆಯ ಶೌಚಾಲಯದ ನೆಲ ಮತ್ತು ಗೋಡೆಯನ್ನು ಸ್ವಚ್ಛಗೊಳಿಸಿದ್ದಾರೆ.
ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು ಸಾರ್ವಜನಿಕ ನೈರ್ಮಲ್ಯದಲ್ಲಿ ತಾವೇ ತೊಡಗಿಸಿಕೊಂಡಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಆಗಸ್ಟ್ನಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಕೊಳಕು ವಾಶ್ರೂಮ್ಗಳ ಬಗ್ಗೆ ದೂರಿದ ನಂತರ, ತೋಮರ್ ಗ್ವಾಲಿಯರ್ನಲ್ಲಿನ ಕಮಿಷನರ್ ಕಚೇರಿಯ ಶೌಚಾಲಯವನ್ನು ಶುಚಿಗೊಳಿಸಿದ್ದರು.
ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಗೆ ಲಭ್ಯವಾಗುವ ಸಾರ್ವಜನಿಕ ಅನುಕೂಲಗಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಮತ್ತು ಆವರಣದಲ್ಲಿನ ಕೊಳಕು ಶೌಚಾಲಯಗಳಿಗೆ ಕಾರಣರಾದವರ ವಿರುದ್ಧ ಶಿಕ್ಷಾರ್ಹ ಕ್ರಮ ಜರುಗಿಸುವಂತೆ ಕಂದಾಯ ಇಲಾಖೆ ಜಂಟಿ ಆಯುಕ್ತ ಆರ್.ಪಿ. ಭಾರತಿ ಅವರಿಗೆ ಸಚಿವರು ಆದೇಶಿಸಿದ್ದಾರೆ.