ಪಾಂಡಾ ಪ್ರಾಣಿಯು ಅತ್ಯಂತ ಮುದ್ದಾಗಿರುವ ಜೀವಿಗಳಲ್ಲಿ ಒಂದಾಗಿದೆ. ಇದರ ತುಂಟಾಟಗಳನ್ನು ನೋಡುವುದೇ ಆನಂದ. ಇದೀಗ ಚೀನಾದ ಬೀಜಿಂಗ್ ಮೃಗಾಲಯದಲ್ಲಿ ಪಾಂಡಾವೊಂದು ತನ್ನ ಆವರಣದಿಂದ ತಪ್ಪಿಸಿಕೊಳ್ಳುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಆರು ವರ್ಷದ ಮೆಂಗ್ ಲ್ಯಾನ್ ಎಂಬ ಪಾಂಡಾ, ಬುಧವಾರ ತನ್ನ ಆವರಣದ ಗೋಡೆಯನ್ನು ಅಳೆಯುವುದನ್ನು ಮೃಗಾಲಯಕ್ಕೆ ಬಂದಿದ್ದ ಸಂದರ್ಶಕರು ಕುತೂಹಲದಿಂದ ವೀಕ್ಷಿಸಿದ್ದಾರೆ. ಪಾಂಡಾ ತನ್ನ ಆವರಣವನ್ನು ಸುತ್ತುವರೆದಿರುವ ಆರು ಅಡಿ ಎತ್ತರದ ಲೋಹದ ಬೇಲಿಯನ್ನು ಹತ್ತಿ, ತಪ್ಪಿಸಿಕೊಳ್ಳಲು ನೋಡಿದೆ. ಇದನ್ನು ನೋಡಲು ಜನಸಮೂಹವೇ ಅಲ್ಲಿ ಸೇರಿತ್ತು. ಅಲ್ಲಿದ್ದ ಸಿಬ್ಬಂದಿ ಪಾಂಡದಿಂದ ದೂರವಿರುವಂತೆ ಜನರಿಗೆ ಕಿವಿಮಾತು ಕೂಡ ಹೇಳಿದ್ದಾರೆ.
ಪಾಂಡಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ದೃಶ್ಯದ ವಿಡಿಯೋವನ್ನು ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಶಕರು ಚಿತ್ರೀಕರಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ.
ಇನ್ನು ಈ ಬಗ್ಗೆ ಬೀಜಿಂಗ್ ಮೃಗಾಲಯವು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದೆ. ಪಾಂಡಾವು ಎಂದೂ ಕೂಡ ಜನರ ಸಂಪರ್ಕಕ್ಕೆ ಬಂದಿಲ್ಲ. ಅಲ್ಲದೆ ಸಂದರ್ಶಕರು ಪ್ರವೇಶಿಸಬಹುದಾದ ಮೃಗಾಲಯದ ಪ್ರದೇಶಕ್ಕೆ ಪ್ರವೇಶಿಸಿಲ್ಲ. ಅದಕ್ಕೆ ಆಹಾರ ನೀಡುವ ಪಾಲಕ ತನ್ನ ಆವರಣಕ್ಕೆ ಅದನ್ನು ಹಿಂತಿರುಗಿ ಕರೆದೊಯ್ದಿದ್ದಾನೆ ಎಂದು ತಿಳಿಸಿದೆ.