ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹವನ್ನು ದೂರದಿಂದ ನೋಡಲು ಖುಷಿಯೆನಿಸಿದ್ರೂ, ಅದು ಹತ್ತಿರ ಬಂದ್ರೆ ಹೃದಯ ಬಡಿತ ನಿಂತಂತೆ ಆಗೋದು ಖಂಡಿತಾ. ಆದರೆ, ಮೃಗಗಳು ಮನುಷ್ಯರಷ್ಟಂತೂ ಕ್ರೂರಿಯಲ್ಲ ಬಿಡಿ. ತಮ್ಮ ಬಗ್ಗೆ ಕಾಳಜಿ ವಹಿಸುವವರ ಬಳಿ ಸಿಂಹಗಳು ಸಾಮಾನ್ಯವಾಗಿ ಸ್ನೇಹಪರವಾಗಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನಿಮ್ಮ ಹೃದಯ ಕರಗೋದಂತೂ ಖಂಡಿತಾ.
ಹೌದು. ವ್ಯಕ್ತಿಯೊಬ್ಬನ ಜೊತೆ ಸಿಂಹಿಣಿಯು ಖುಷಿಯಿಂದ ಆಟವಾಡುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಸಾಕುನಾಯಿಯನ್ನು ಗೂಡಿನಿಂದ ಬಿಟ್ಟಾಗ ಯಾವ ರೀತಿ ಓಡಿ ಬಂದು ಮಾಲೀಕನನ್ನು ತಬ್ಬಿಕೊಳ್ಳುತ್ತದೆಯೋ ಅದೇ ರೀತಿ ಇಲ್ಲಿ ಸಿಂಹಿಣಿ ಕೂಡ ತನ್ನ ಪಾಲಕನನ್ನು ತಬ್ಬಿಕೊಂಡಿದೆ.
ಸಿಂಹಿಣಿಯ ಪಾಲಕನನ್ನು ವಾಲ್ ಗ್ರುನರ್ ಎಂದು ಗುರುತಿಸಲಾಗಿದೆ. ಈತ ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದ ಕಲಹರಿ ಮರುಭೂಮಿಯ ಮೀಸಲು ಪ್ರದೇಶದಲ್ಲಿ ಸಿರ್ಗಾ ಎಂಬ ಸಿಂಹಿಣಿಯ ಪಾಲಕನಾಗಿದ್ದಾನೆ. ಸಿಂಹಿಣಿಯನ್ನು ಪಾಲನೆ, ಪೋಷಣೆ ಮಾಡುವುದರ ಜೊತೆಗೆ ಅವರು ತುಂಬಾ ಪ್ರೀತಿಯಿಂದ ಸಲಹುತ್ತಿದ್ದಾರೆ. ಸಿಂಹಿಣಿ ಕೂಡ ತನ್ನ ಪಾಲಕನ ಜೊತೆಗೆ ಅತ್ಯಂತ ಸ್ನೇಹಪರವಾಗಿದೆ.
ವಾಲ್ ಆಗಾಗ್ಗೆ ತಮ್ಮ ಹಾಗೂ ಸಿಂಹಿಣಿ ಸಿರ್ಗಾದ ಸುಂದರ ಚಿತ್ರ, ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಆವರಣದ ಗೇಟ್ ತೆಗೆಯುತ್ತಿದ್ದಂತೆ ಹೆಣ್ಣು ಸಿಂಹ ಜಿಗಿದು, ಆತನನ್ನು ಅಪ್ಪಿಕೊಂಡಿದೆ. ನಂತರ ಆತನನ್ನು ಮುದ್ದಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
https://www.youtube.com/watch?v=yBdTzJZOg2s