ರೈಲು ಪ್ರಯಾಣ ಆರಾಮದಾಯಕ ಪ್ರಯಾಣಗಳಲ್ಲಿ ಒಂದು. ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಸೇವೆಗಳನ್ನು ಶುರು ಮಾಡ್ತಿರುತ್ತದೆ. ಈಗ ಮಹಿಳಾ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಹಿಳೆಯರು ರೈಲಿನಲ್ಲಿ ಸೀಟಿನ ಬಗ್ಗೆ ಚಿಂತಿಸಬೇಕಾಗಿಲ್ಲ. ಬಸ್ ಮತ್ತು ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟುಗಳ ವ್ಯವಸ್ಥೆ ಇರುವಂತೆ ಭಾರತೀಯ ರೈಲ್ವೇ ಕೂಡ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲಿದೆ.
ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿಶೇಷ ಬರ್ತ್ಗಳನ್ನು ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ದೂರದ ರೈಲುಗಳಲ್ಲಿ ಮಹಿಳೆಯರ ಆರಾಮದಾಯಕ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇ, ರಿಸರ್ವ್ ಬರ್ತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಆರಂಭಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಎಕ್ಸ್ ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ನಲ್ಲಿ ಆರು ಬರ್ತ್ಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಗರೀಬ್ ರಥ, ರಾಜಧಾನಿ, ದುರಂತೋ ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್ ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್ನಲ್ಲಿ ಆರು ಬರ್ತ್ಗಳನ್ನು ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ. ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.