ಬೆಳಗಾವಿ: ಬೆಳಗಾವಿಯಲ್ಲಿ ಕಳೆದ ರಾತ್ರಿ ಪುಂಡರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವುದು ಅಕ್ಷಮ್ಯ. ವಿಧಾನಮಂಡಲ ಅಧಿವೇಶನಕ್ಕೆ ಹೋಗಲು ಪಾಸ್ ಅಂಟಿಸಲಾಗಿದ್ದ ವಾಹನಗಳನ್ನೇ ಗುರಿಯಾಗಿಸಿಕೊಂಡು ಕಲ್ಲುತೂರಾಟ ನಡೆಸಲಾಗಿದೆ. ರಾಯಣ್ಣ ಪ್ರತಿಮೆ ಹಾಳು ಮಾಡಿರುವುದು ಕ್ಷಮಾರ್ಹವಲ್ಲದ ಅಪರಾಧ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಕುಮಾರಸ್ವಾಮಿ, ಬೆಳಗಾವಿಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿ ಭಾಷ ವೈಷಮ್ಯ ಹೆಚ್ಚಿಸುವುದು ದುರುಳರ ಉದ್ದೇಶವಿದ್ದಂತಿದೆ. ಶಾಂತಿ ಕದಡಿ ಜನರಲ್ಲಿ ಭಯಭೀತಿ ಉಂಟುಮಾಡಲು ಪುಂಡರನ್ನು ಪ್ರಚೋದಿಸಿದವರನ್ನು ಹೊರಗೆಳೆದು ಶಿಕ್ಷಿಸಬೇಕು. ಈ ಪುಂಡಾಟದ ಹಿಂದೆ ದೊಡ್ಡ ಹುನ್ನಾರವಿದೆ ಎಂದು ಹೇಳಿದ್ದಾರೆ.
BREAKING: ಆಟೋರಿಕ್ಷಾದ ಮೇಲೆ ಬಿದ್ದ ಕಂಟೇನರ್ ಟ್ರಕ್..! ನಾಲ್ವರ ದಾರುಣ ಸಾವು
ಬೆಳಗಾವಿ ವಿವಾದ ಮುಗಿದ ಅಧ್ಯಾಯ. ಆದಾಗ್ಯೂ ಕೆಲ ವಿಚ್ಛಿಧ್ರಕಾರಿ ಶಕ್ತಿಗಳು ಆ ಭಾಗದಲ್ಲಿ ಅಶಾಂತಿ ಸೃಷ್ಟಿಸುತ್ತ ಕನ್ನಡಿಗರು-ಮರಾಠಿಗರ ನಡುವೆ ವೈಷಮ್ಯಕ್ಕೆ ಕಾರಣವಾಗುತ್ತಿದ್ದಾರೆ. ಅಂಥ ಶಕ್ತಿಗಳನ್ನು ಸರ್ಕಾರ ಮೇಲೋತ್ಪಾಟನೆ ಮಾಡಬೇಕು. ಪುಂಡರನ್ನು ಕೂಡಲೇ ಬೇಟೆಯಾಡಿ ಇನ್ನೆಂದು ಇಂಥ ತಪ್ಪು ಮಾಡದಂತೆ ಶಾಸ್ತಿ ಮಾಡಬೇಕು ಎಂದಿದ್ದಾರೆ.
ಸರ್ಕಾರಿ ಕಾರುಗಳನ್ನು ಗುರಿ ಮಾಡಿರುವುದು ರಾಜ್ಯ ಸರ್ಕಾರವನ್ನೇ ಗುರಿ ಮಾಡಿದಂತೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿರುವುದು ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ದಾಳಿಗೆ ಸಮ. ಸರಕಾರ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಕೂಡಲೇ ಆ ದುರುಳರಿಗೆ ಕನ್ನಡಿಗರ ಶಕ್ತಿ ಏನೆಂಬುದನ್ನು ತೋರಿಸಬೇಕು. ಬೆಳಗಾವಿಯಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿರುವ ಈ ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರುವುದಿಲ್ಲ ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.