ಪಾಟ್ನಾ: 2018 ರಲ್ಲಿ ಬೋಧಗಯಾದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
ಉಳಿದ ಐವರು ಉಗ್ರರಿಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಪಾಟ್ನಾದ ಎನ್ಐಎ ವಿಶೇಷ ಕೋರ್ಟ್ ನಿಂದ ತೀರ್ಪು ಪ್ರಕಟವಾಗಿದೆ. ಮಹಾಬೋಧಿ ದೇವಾಲಯದಲ್ಲಿ ಉಗ್ರರು ಬಾಂಬ್ ಸ್ಪೋಟಿಸಿದ್ದ ಪ್ರಕರಣ ಇದಾಗಿದೆ.
ಪಾಟ್ನಾದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯವು ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದೆ. 9 ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ(ಜೆಎಂಬಿ) ಭಯೋತ್ಪಾದಕರ ಪೈಕಿ ಎಂಟು ಮಂದಿಯನ್ನು ದೋಷಿ ಎಂದು ಘೋಷಿಸಲಾಗಿತ್ತು. ಬಿಹಾರದಲ್ಲಿ ಎನ್ಐಎ ನಡೆಸಿದ ಮೊದಲ ಪ್ರಕರಣ ಇದಾಗಿದ್ದು, ಆರೋಪಿಗಳು ನ್ಯಾಯಾಲಯದಲ್ಲಿ ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದರು.
ಅಹ್ಮದ್ ಅಲಿ ಅಲಿಯಾಸ್ ಕಾಲು, ನೂರ್ ಆಲಂ ಮೊಮಿನ್, ಮೊಹಮ್ಮದ್ ಆದಿಲ್ ಶೇಖ್, ಅಬ್ದುಲ್ ಕರೀಂ, ಮುಸ್ತಾಫಿಜುರ್ ರೆಹಮಾನ್, ಆರಿಫ್ ಹುಸೇನ್, ಮೊಹಮ್ಮದ್ ಪೈಗಂಬರ್ ಶೇಖ್ ಮತ್ತು ದಿಲಾವರ್ ಹೊಸೈನ್ ಅವರ ತಪ್ಪೊಪ್ಪಿಗೆ ಆಧಾರದ ಮೇಲೆ ಶಿಕ್ಷೆ ಪ್ರಕಟಿಸಲಾಗಿದೆ.