ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗುತ್ತಾ ಬಂದಿರುವ ಶೀನಾ ಬೋರಾ-ಇಂದ್ರಾಣಿ ಮುಖರ್ಜಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗಳು ಜೀವಂತವಿದ್ದು, ತನಿಖೆ ನಡೆಸುತ್ತಿರುವ ಸಿಬಿಐ ಆಕೆಗಾಗಿ ಕಾಶ್ಮೀರದಲ್ಲಿ ಹುಡುಕಬೇಕು ಎಂದು ಆಪಾದಿತೆ ಇಂದ್ರಾಣಿ ಮುಖರ್ಜಿ ತಿಳಿಸಿದ್ದಾಳೆ. ಈ ವಿಚಾರವನ್ನು ತನಗೆ ಜೈಲಿನಲ್ಲಿರುವ ಮಹಿಳೆಯೊಬ್ಬರು ತಿಳಿಸಿದ್ದಾಗಿ ಇಂದ್ರಾಣಿ ಹೇಳಿಕೊಂಡಿದ್ದಾಳೆ.
ಸಿಬಿಐ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಇಂದ್ರಾಣಿ ಶೀಘ್ರವೇ ಆಲಿಕೆಗೆ ಹಾಜರಾಗಲಿದ್ದಾಳೆ. ಮಾಧ್ಯಮ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ಇಂದ್ರಾಣಿ ವಿರುದ್ಧ 24 ವರ್ಷ ವಯಸ್ಸಿನ ಮಗಳು ಬೋರಾಳನ್ನು ಕೊಲೆ ಮಾಡಿದ ಆಪಾದನೆ ಇದೆ. ಏಪ್ರಿಲ್ 2012ರಲ್ಲಿ ನಡೆದ ಈ ಕೃತ್ಯದಲ್ಲಿ ಇಂದ್ರಾಣಿಗೆ ಆಕೆಯ ಕಾರಿನ ಚಾಲಕ ಶ್ಯಾಮ್ವಾರ್ ರಾಯ್ ಹಾಗು ಖನ್ನಾ ಎಂಬ ಇಬ್ಬರು ನೆರವಾಗಿದ್ದಾರೆ ಎನ್ನಲಾಗಿದೆ.
ಮುಖರ್ಜಿ ಹಿಂದಿನ ಸಂಬಂಧದಲ್ಲಿ ಜನಿಸಿದ ಬೋರಾಳ ದೇಹವು ರಾಯಗಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಇಂದ್ರಾಣಿಯನ್ನು ಆಗಸ್ಟ್ 2015ರಲ್ಲಿ ಬಂಧಿಸಲಾಗಿದೆ. ಮಾಧ್ಯಮ ಲೋಕದ ಮತ್ತೊಂದು ಬಿಗ್ಶಾಟ್ ಪೀಟರ್ ಮುಖರ್ಜಿಯನ್ನು ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಪೀಟರ್ ಸದ್ಯ ಬಾಂಬೆ ಹೈಕೋರ್ಟ್ನಿಂದ ಜಾಮೀನು ಪಡೆದು ಹೊರಗಿದ್ದಾನೆ.
ಸೆಕ್ಷನ್ ತಪ್ಪಾದ ಬಳಕೆ ಕಾರಣಕ್ಕೆ ಎಫ್ಐಆರ್ ವಜಾಗೊಳಿಸಲಾಗದು: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ
ಈ ಪ್ರಕರಣದ ತನಿಖೆಗೆ ಕಾಲಕಾಲಕ್ಕೆ ಅನೇಕ ತಿರುವುಗಳು ಸಿಗುತ್ತಿದ್ದು, ಇಡೀ ದೇಶದ ಗಮನ ಸೆಳೆದಿದೆ.
ಇದೇ ರೀತಿ ತನಿಖೆ ವೇಳೆ ಪ್ಲಾಟ್ ಟ್ವಿಸ್ಟ್ಗಳ ಮೂಲಕ ಮಾಧ್ಯಮಗಳ ಗಮನ ಕೇಂದ್ರೀಕರಿಸಿಕೊಂಡಿದ್ದ ಇನ್ನಷ್ಟು ಕೊಲೆ ಪ್ರಕರಣಗಳು ಇವು:
ಆರುಷಿ ತಲ್ವಾರ್
14 ವರ್ಷದ ಆರುಷಿ ತಲ್ವಾರ್ ನೋಯಿಡಾದಲ್ಲಿರುವ ಆಕೆಯ ಮನೆಯ ಕೊಣೆಯೊಂದರಲ್ಲಿ ಕುತ್ತಿಗೆ ಸೀಳಿ ಕೊಲ್ಲಲ್ಪಟ್ಟ ಸ್ಥಿತಿಯಲ್ಲಿ ಮೇ 2008ರಲ್ಲಿ ಕಾಣಿಸಿಕೊಂಡಿದ್ದಳು. ಆಕೆಯ ಸಾವಿನ ಸಂಬಂಧ ಅನುಮಾನವು ಮೊದಲಿಗೆ 45 ವರ್ಷ ವಯಸ್ಸಿನ ಹೇಮರಾಜ್ ಮೇಲೆ ಇತ್ತು, ಆದರೆ ಕಾಣೆಯಾಗಿದ್ದ ಆತನ ದೇಹ ಕೊಲೆಯಾದ ಎರಡು ದಿನಗಳ ಬಳಿಕ ಮನೆಯ ಛಾವಣಿ ಮೇಲೆ ಕಾಣಿಸಿತ್ತು.
ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಅಷ್ಟಾಗಿ ಮುತುವರ್ಜಿ ವಹಿಸದೇ ಇದ್ದಂತೆ ಕಂಡ ಬಳಿಕ, ಅಂದಿನ ಮುಖ್ಯಮಂತ್ರಿ ಮಾಯಾವತಿಯಿಂದ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ ಬಿತ್ತು. ಸುದೀರ್ಘ ತನಿಖೆ ಬಳಿಕ ಆರುಷಿ ಹೆತ್ತವರಾದ ಡಾ. ರಾಜೇಶ್ ಮತ್ತು ನೂಪುರ್ ತಲ್ವಾರ್ಗೆ ತಮ್ಮ ಮಗಳು ಹಾಗೂ ಹೇಮರಾಜ್ ಕೊಲೆ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಸಾಕ್ಷ್ಯಗಳ ಕೊರತೆಯಿಂದ ಅಲಹಾಬಾದ್ ಹೈಕೋರ್ಟ್ ವೈದ್ಯ ದಂಪತಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ಸುನಂದಾ ಪುಷ್ಕರ್
ಕಾಂಗ್ರೆಸ್ ನಾಯಕ ಶಶಿ ತರೂರ್ರ ಪತ್ನಿಯಾಗಿದ್ದ ಸುನಂದಾ ಪುಷ್ಕರ್ ದೆಹಲಿಯ ಐಷಾರಾಮಿ ಹೊಟೇಲ್ ಒಂದರಲ್ಲಿ ಜನವರಿ 17, 2014ರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಆಕೆಯ ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ಆತ್ಮಹತ್ಯೆಯ ಅನುಮಾನ ಹಾಗೂ ಅತಿಯಾದ ಡ್ರಗ್ ಸೇವನೆಯ ಕೋನದಿಂದ ತನಿಖೆ ಮಾಡಲಾಗಿತ್ತು.
ಆಕೆಯ ಸಾವಿನ ತನಿಖೆ ನಡೆಸುತ್ತಿದ್ದ ವೈದ್ಯಕೀಯ ತಂಡವು ಅಕ್ಟೋಬರ್ 2014ರಲ್ಲಿ ಆಕೆ ವಿಷ ಸೇವನೆಯಿಂದ ಮೃತಪಟ್ಟಿದ್ದಾಳೆಂದು ತಿಳಿಸಿದ ಬಳಿಕ ಸುನಂದಾ ಕೊಲೆಯಾಗಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದರು. ಈ ತಿಂಗಳ ಆಗಸ್ಟ್ನಲ್ಲಿ ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಶಶಿ ತರೂರ್ಗೆ ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಿತು.
ರಿಜ಼್ವಾನುರ್ ರೆಹಮಾನ್
ದುರಂತಮಯ ಪ್ರೇಮಕಥೆಯಾದ ರಿಜ಼್ವಾನುರ್ ರೆಹಮಾನ್ ಕೊಲೆ ಬಹಳಷ್ಟು ಗಮನ ಸೆಳೆದಿತ್ತು. ಕೈಗಾರಿಕೋದ್ಯಮಿ ಅಶೋಕ್ ತೋಡಿ ಪುತ್ರಿಯನ್ನು ಮದುವೆಯಾಗಿದ್ದ ರಿಜ಼್ವಾನುರ್ ರೆಹಮಾನ್ 2007ರಲ್ಲಿ ರೈಲ್ವೇ ಹಳಿಯ ಮೇಲೆ ಶವವಾಗಿ ಕಂಡುಬಂದಿದ್ದರು.
ಇದಕ್ಕೂ ಮುನ್ನ, ರಿಜ಼್ವಾನುರ್ ರೆಹಮಾನ್ ತಮ್ಮ ಪತ್ನಿ ಹಾಗೂ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳಿಂದ ಮದುವೆ ಮುರಿದುಕೊಳ್ಳಬೇಕೆಂದು ಸಾಕಷ್ಟು ಒತ್ತಡ ಎದುರಿಸಿದ್ದರು. ರಿಜ಼್ವಾನುರ್ ರೆಹಮಾನ್ ಕೊಲೆಗೆ ಅಶೋಕ್ ತೋಡಿ ಸಂಚು ರೂಪಿಸಿದ್ದಾನೆ ಎಂದು ಶಂಕಿಸಲಾಗಿತ್ತು. ಆದರೆ ಬಹಳಷ್ಟು ತನಿಖೆ ಬಳಿಕ ಈ ಸಾವನ್ನು ಆತ್ಮಹತ್ಯೆ ಎಂದು ನಿರ್ಧರಿಸಲಾಯಿತು.
ನೈನಾ ಸಾಹ್ನಿ
’ತಂದೂರ್ ಕೊಲೆ ಪ್ರಕರಣ’ ಎಂದು ಹೆಸರಾಗಿರುವ ನೈನಾ ಸಾಹ್ನಿ ಕೊಲೆಯು ದೇಶ ಕಂಡ ಅತ್ಯಂತ ಬರ್ಬರ ಕೃತ್ಯಗಳಲ್ಲಿ ಒಂದಾಗಿದೆ. ಪುರುಷ ಸ್ನೇಹಿತನೊಬ್ಬನೊಂದಿಗೆ ಅಫೇರ್ ಇದೆ ಎಂಬ ಅನುಮಾನದಲ್ಲಿ ಸುಶೀಲ್ ಕುಮಾರ್ ಶರ್ಮಾ ತನ್ನ ಪತ್ನಿಯನ್ನು 1995ರಲ್ಲಿ ಗುಂಡಿಟ್ಟು ಕೊಂದಿದ್ದ. ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದ ಸುಶೀಲ್, ತಂದೂರಿ ಒಲೆಯಲ್ಲಿ ಸುಟ್ಟು ಹಾಕಲು ಯತ್ನಿಸಿದ್ದ. ಡಿಎನ್ಎ ಸಾಕ್ಷ್ಯ ಹಾಗೂ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆಯ ಮೂಲಕ ಆಪಾದಿತ ತಪ್ಪಿತಸ್ಥ ಎಂದು ಸಾಬೀತು ಪಡಿಸಲು ಸಾಧ್ಯವಾಗಿತ್ತು.
ಮಧುಮಿತಾ ಶುಕ್ಲಾ
ಕವಯಿತ್ರಿ ಮಧುಮಿತಾ ಶುಕ್ಲಾರನ್ನು ಮೇ 2003ರಲ್ಲಿ ಲಖನೌನಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಉತ್ತರ ಪ್ರದೇಶ ಸರ್ಕಾರದ ಅಂದಿನ ಸಚಿವರಾಗಿದ್ದ ಅಮರ್ ಮಣಿ ತ್ರಿಪಾಠಿ ಈ ಕೊಲೆ ಮಾಡಿಸಿದ್ದ. ತ್ರಿಪಾಠಿ ಹಾಗೂ ಆತನ ಮಡದಿ ಕವಯಿತ್ರಿಯ ಕೊಲೆ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.
ಮಧುಮಿತಾ ತನ್ನ ಸಾವಿನ ವೇಳೆ ಗರ್ಭಿಣಿಯಾಗಿದ್ದಳು ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ. ಅಮರ್ ಮಣಿ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದ ಕಾರಣ ಕೊಲೆ ಪ್ರಕರಣಕ್ಕೆ ಭಾರೀ ಪ್ರಚಾರ ಸಿಕ್ಕಿತ್ತು. ತ್ರಿಪಾಠಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶುಕ್ಲಾ, ಆತನ ಮಗುವಿಗೆ ತಾಯಿಯಾಗಲಿದ್ದರು ಎಂಬುದು ಭ್ರೂಣದ ಡಿಎನ್ಎ ಪರೀಕ್ಷೆ ಮಾಡಿದ ವೇಳೆ ಸಾಬೀತಾಗಿತ್ತು.