ಕೆಲವರಿಗೆ ನಾನ್ ವೆಜ್ ಅಂದ್ರೆ ಭಾರೀ ಇಷ್ಟ. ಆದರೂ ಕೆಲವೊಮ್ಮೆ ಒಂದೇ ರೀತಿಯ ರುಚಿ ಅನಿಸುತ್ತದೆ. ವಿಶೇಷ ರುಚಿಯ ರೊಮೇನಿಯಾ ಮಟನ್ ಅನ್ನು ಮಾಡುವ ವಿಧಾನ ಇಲ್ಲಿದೆ.
ನೀವು ಮನೆಯಲ್ಲಿಯೇ ಸುಲಭವಾಗಿ ರೊಮೇನಿಯಾ ಮಟನ್ ಮಾಡಿ, ಅದರ ರುಚಿಯನ್ನು ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
1 ಕೆ.ಜಿ. ಮಾಂಸ, 3 ಸ್ಪೂನ್ ಗಸಗಸೆ, 1 ಬೆಳ್ಳುಳ್ಳಿ, 2 ಚೂರು ದಾಲ್ಚಿನ್ನಿ, 12 ಕರಿಮೆಣಸು, 6 ಟೀ ಸ್ಪೂನ್ ತುಪ್ಪ, 3 ಕಪ್ ಹಾಲು, ಅರ್ಧ ಹೋಳು ತೆಂಗಿನಕಾಯಿ, 10 ಹಸಿ ಮೆಣಸಿನಕಾಯಿ, 4 ಸ್ಪೂನ್ ದನಿಯಾ ಪುಡಿ, 6 ಲವಂಗ, ಸ್ವಲ್ಪ ಜಾಪತ್ರಿ, 6 ಟೀ ಸ್ಪೂನ್ ಹುಳಿ ಮೊಸರು, ತಲಾ 15 ಬಾದಾಮಿ, ಗೋಡಂಬಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ಮೊದಲಿಗೆ ಮಾಂಸವನ್ನು ಚೆನ್ನಾಗಿ ತೊಳೆದುಕೊಂಡು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಂಡು ಹುಳಿ ಮೊಸರಿನಲ್ಲಿ ಹಾಕಿರಿ.
ಗೋಡಂಬಿ ಹಾಗೂ ಬಾದಾಮಿ ಹೊರತುಪಡಿಸಿ, ಎಲ್ಲಾ ಮಸಾಲೆ ಪದಾರ್ಥಗಳನ್ನು ರುಬ್ಬಿಕೊಳ್ಳಿರಿ. ಮಾಂಸವನ್ನು ಹುಳಿ ಮೊಸರಿನಿಂದ ತೆಗೆಯಿರಿ.
ಒಲೆಯ ಮೇಲೆ ತುಪ್ಪ ಹಾಕಿ ಕಾಯಿಸಿ, ಬಳಿಕ ಅದರಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
5 ನಿಮಿಷದ ಬಳಿಕ ಮೊದಲೇ ಕಾಯಿಸಿಟ್ಟುಕೊಂಡ ಹಾಲನ್ನು ಹಾಕಿ.
ಬಳಿಕ ಉಪ್ಪು, ಅಗತ್ಯವಾದರೆ ನೀರನ್ನು ಹಾಕಿ ಸಣ್ಣಗಿನ ಉರಿಯಲ್ಲಿ ಮಾಂಸವನ್ನು ಬೇಯಿಸಿರಿ. ಚೆನ್ನಾಗಿ ಬೆಂದ ಬಳಿಕ, ಅದರ ಮೇಲೆ ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಹಾಕಿ ಬಿಸಿಯಾಗಿರುವಾಗಲೇ ರುಚಿ ಸವಿಯಿರಿ.