ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬೇಸರದ ಸುದ್ದಿ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಸಾಲದ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳ ಮಾಡಿದೆ. ಹೊಸ ದರಗಳು ಡಿಸೆಂಬರ್ 15ರಿಂದಲೇ ಜಾರಿಗೆ ಬಂದಿವೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಎಸ್.ಬಿ.ಐ. ಮೂಲ ದರವನ್ನು 5 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿ ಶೇಕಡಾ 7.45 ಕ್ಕೆ ಇಳಿಸಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇಕಡಾ 0.10 ರಷ್ಟು ಹೆಚ್ಚಿಸಿದ್ದು, ಈಗ ಹೊಸ ದರವು ಶೇಕಡಾ 7.55ರಷ್ಟಾಗಿದೆ. ಎಸ್.ಬಿ.ಐ. 2 ಕೋಟಿಗಿಂತ ಹೆಚ್ಚಿನ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಿದೆ. 2 ಕೋಟಿಗಿಂತ ಕಡಿಮೆಯಿರುವ ಎಫ್.ಡಿ.ಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಬ್ಯಾಂಕ್‌ನ ಮೂಲ ದರ ಹೆಚ್ಚಳದಿಂದ ಎಸ್.ಬಿ.ಐ. ಗ್ರಾಹಕರ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಸಾಲಗಾರರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಗೃಹ ಸಾಲ, ವಾಹನ ಸಾಲ, ವ್ಯಾಪಾರ ಸಾಲ ಮತ್ತು ವೈಯಕ್ತಿಕ ಸಾಲದ ದರಗಳು ಹೆಚ್ಚಾಗಲಿವೆ. ಈಗ ಗ್ರಾಹಕರು ಮೊದಲಿಗಿಂತ ಹೆಚ್ಚು ಇಎಂಐ ಪಾವತಿಸಬೇಕಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್, ರೆಪೋ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ ಎಸ್.ಬಿ.ಐ. ಮೂಲ ದರವನ್ನು ಹೆಚ್ಚಿಸಿದೆ.