2022ರ ವಿಧಾನಸಭಾ ಚುನಾವಣೆಗಳಿಗೂ ಮುನ್ನ ಚುನಾವಣಾ ಆಯೋಗದ ಶಿಫಾರಸಿನಂತೆ ಚುನಾವಣಾ ಸುಧಾರಣೆಗಳನ್ನು ತರಲು ಮಹತ್ವದ ತಿದ್ದುಪಡಿಗಳನ್ನು ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಈ ಸುಧಾರಣೆಗಳಲ್ಲಿ ಒಂದಾಗಿದೆ. ಈ ಸಂಬಂಧ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಜೊತೆಗೆ ಮಾತುಕತೆ ನಡೆಸಿದ ಕೇಂದ್ರ ಸರ್ಕಾರ, ಹೊಸ ಮತದಾರರ ನೋಂದಣಿ ಮಾಡಲು ಆಧಾರ್ ಅನ್ನು ಬಳಸಿಕೊಳ್ಳಲು ಅನುಮತಿ ಕೋರಿದೆ.
ಪಾನ್-ಆಧಾರ್ ಲಿಂಕಿಂಗ್‌ನಂತೆಯೇ, ಆಧಾರ್ ಕಾರ್ಡ್ ಅನ್ನು ಮತದಾರನ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡುವುದಕ್ಕೆ ಈಗ ಸಾಧ್ಯವಿದೆ. ಆದರೆ ಈ ಕ್ರಿಯೆಯನ್ನು ಸ್ವಯಂ ಪ್ರೇರಣಿಯಿಂದ ಮಾತ್ರ ಮಾಡಬಹುದಾಗಿದೆ. ಇದೇ ವೇಳೆ, ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಹೆಚ್ಚುವರಿ ಪ್ರಯತ್ನಗಳಿಗೆ ಅವಕಾಶ ನೀಡಲಾಗುವುದು.
ವಿದ್ಯಾರ್ಥಿನಿಯರಿಗೆ 240 ದಿನ ಹೆರಿಗೆ ರಜೆ: ಯುಜಿಸಿಯಿಂದ ವಿವಿಗಳಿಗೆ ನಿರ್ದೇಶನ
ಜನವರಿ 1ರಿಂದ ಆರಂಭವಾಗುವಂತೆ, ಮೊದಲ ಬಾರಿಗೆ ಮತದಾನ ಮಾಡುವವರು ನಾಲ್ಕು ಭಿನ್ನ ಕಟ್‌ಆಫ್ ದಿನಾಂಕಗಳೊಂದಿಗೆ ವರ್ಷವೊಂದರಲ್ಲಿ ನಾಲ್ಕು ಬಾರಿ ನೋಂದಣಿಯಾಗಲು ಅವಕಾಶ ನೀಡಲಾಗುವುದು. ಇದುವರೆಗೂ ಹೀಗೆ ವರ್ಷಕ್ಕೊಮ್ಮೆ ಮಾತ್ರವೇ ಮಾಡಲು ಸಾಧ್ಯವಿತ್ತು.
ರಿಮೋಟ್ ಮತದಾನಕ್ಕೆ ನೀಲನಕ್ಷೆ ಸಿದ್ಧಪಡಿಸಲು ಮುಂದಾಗಿರುವ ಚುನಾವಣಾ ಆಯೋಗ, ವಲಸೆ ಕಾರ್ಮಿಕರ ಜನಸಂಖ್ಯೆ ನಕ್ಷೆಗಳನ್ನು ರಚಿಸಲು ಚಿಂತನೆ ನಡೆಸುತ್ತಿರುವಂತೆಯೇ ಮೇಲ್ಕಂಡ ಸುಧಾರಣೆಯೊಂದು ಪ್ರಭಾವಕ್ಕೆ ಬರಲು ಸಜ್ಜಾಗಿದೆ.