ಮೆದುಳಿನ ಕ್ಷಮತೆಯನ್ನು ಹಂತಹಂತವಾಗಿ ಕ್ಷೀಣಿಸುವಂತೆ ಮಾಡುವ ಅಲ್ಝೈಮರ್ ಕಾಯಿಲೆಗೆ ಯಾವುದೇ ಮದ್ದಿಲ್ಲ ಎಂಬುದು ಸದ್ಯದ ಮಟ್ಟಿಗೆ ವೈದ್ಯಕೀಯ ಲೋಕದಲ್ಲಿ ಸ್ಥಾಪಿತವಾದ ವಾಸ್ತವ. ಮೆದುಳಿನಲ್ಲಿ ಬೆಳೆಯುವ ಬೀಟಾ-ಅಮೈಲಾಯ್ಡ್ ಮತ್ತು ಟೌ ಪ್ರೋಟೀನ್‌ಗಳಿಂದಾಗಿ ಮೆದುಳಿನಲ್ಲಿ ಅಮೈಲಾಯ್ಡ್ ಪ್ಲಾಕ್‌ಗಳು ಹಾಗೂ ಟೌ ನ್ಯೂರೋಫರ್ಬಿಲ್ಲರಿ ಟ್ಯಾಂಗಲ್‌ಗಳು ಬೆಳೆದು ಅಲ್ಝೈಮರ್ ಸಂಬಂಧಿ ಬದಲಾವಣೆಗಳು ಉಂಟಾಗುತ್ತವೆ.
ಇದೀಗ, ಲೈಂಗಿಕ ಕ್ಷಮತೆ ವರ್ಧಿಸಲು ತೆಗೆದುಕೊಳ್ಳುವ ವಯಾಗ್ರಾ ಮಾತ್ರೆಗಳು ಅಲ್ಝೈಮರ್ ರೋಗದ ವಿರುದ್ಧ ಉಪಯುಕ್ತ ಚಿಕಿತ್ಸೆ ನೀಡಬಲ್ಲದು ಎಂದು ಅಮೆರಿಕದ ಸಂಶೋಧಕರು ತಿಳಿಸಿದ್ದಾರೆ.
ಅಮೆರಿಕದ ಕ್ಲೀವ್‌ಲ್ಯಾಂಡ್ ಕ್ಲಿನಿಕ್ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ, ವಯಾಗ್ರಾದಿಂದ ಮೆದುಳಿನ ಮೇಲೆ ಉಂಟಾಗುವ ಪರಿಣಾಮಗಳನ್ನು ಗಮನಿಸಲಾಗಿದೆ.
ಅಮೆರಿಕದ ಕೇಂದ್ರ ಮದ್ದು ಪ್ರಾಧಿಕಾರ (ಎಫ್‌ಡಿಎ) ಲೈಂಗಿಕ ಕ್ಷಮತೆ ವರ್ಧಿಸಲು ಹಾಗೂ ಪಲ್ಮನರಿ ಹೈಪರ್‌ಟೆನ್ಷನ್‌ಗೆ ಬಳಸಲು ಅನುಮೋದನೆ ನೀಡಿರುವ ವಯಾಗ್ರಾದಿಂದ ಅಲ್ಝೈಮರ್ ರೋಗವನ್ನು ಮೊದಲೇ ಪತ್ತೆ ಮಾಡಿ ಅದನ್ನು ವಾಸಿ ಮಾಡಲು ಸಾಧ್ಯ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.
ಈ ರೀತಿಯ ಡೆಮೆಂಟಿಯಾದಲ್ಲಿ ಸಂಗ್ರಹಗೊಳ್ಳುವ ಕೆಲವೊಂದು ಪ್ರೋಟೀನ್‌ಗಳನ್ನು ಈ ಮದ್ದು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತದೆ ಎಂದು ಕೋಶಗಳ ಮೇಲೆ ಮಾಡಲಾದ ಪರೀಕ್ಷೆಯಲ್ಲಿ ತಿಳಿದುಬಂದಿರುವುದಾಗಿ ಸಂಶೋಧಕರು ತಿಳಿಸಿದಾರೆ.
70 ಲಕ್ಷ ರೋಗಿಗಳ ದತ್ತಾಂಶ ಸಂಗ್ರಹಿಸಿ ಅಧ್ಯಯನ ನಡೆಸಿದ ಸಂಶೋಧಕರ ತಂಡವು, ವಯಾಗ್ರಾ ತೆಗೆದುಕೊಳ್ಳುವ ಮಂದಿಯಲ್ಲಿ ಅಲ್ಝೈಮರ್ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಕಂಡುಕೊಂಡಿದೆ.