ಮುಂಬೈನ ಗೋವಾಂಡಿ ಪ್ರದೇಶದ ರಿಕ್ಷಾ ಚಾಲಕರೊಬ್ಬರ ಪುತ್ರಿಯಾದ ಸಾನಿಯಾ ಮಿಸ್ತ್ರಿ ತನ್ನ 15ನೇ ವಯಸ್ಸಿನಲ್ಲೇ ಖ್ಯಾತಿ ಪಡೆಯುವ ಸಾಧನೆಗೈದಿದ್ದಾಳೆ. 11ನೇ ತರಗತಿ ವಿದ್ಯಾರ್ಥಿನಿ ಸಾನಿಯಾ ರ‍್ಯಾಪರ್ ಆಗುವ ಕಲೆಯನ್ನು ಮೂರು ವರ್ಷಗಳಿಂದ ಕರಗತ ಮಾಡಿಕೊಂಡಿದ್ದಾಳೆ.
ತನ್ನ ಬಳಿ ಸ್ಮಾರ್ಟ್‌ಫೋನ್ ಸಹ ಇಲ್ಲದೇ ಇದ್ದರೂ ಸಹ ಸಾನಿಯಾ ತನ್ನ ಸ್ನೇಹಿತರ ನೆರವಿನಿಂದ ರ‍್ಯಾಪ್ ವಿಡಿಯೋಗಳನ್ನು ಮಾಡುತ್ತಿದ್ದು, ಆಕೆಯ ಕೆಲ ವಿಡಿಯೋಗಳು ವೈರಲ್ ಆಗಿವೆ. ಯೂಟ್ಯೂಬ್‌ನಲ್ಲಿ ತನ್ನದೇ ಚಾನೆಲ್ ’ಸಾನಿಯಾ ಎಂಕ್ಯೂ’ ನಡೆಸುವ ಸಾನಿಯಾ ಅದಾಗಲೇ ಮೂರು ಸಾವಿರಕ್ಕೂ ಹೆಚ್ಚಿನ ಚಂದಾದಾರರನ್ನು ಹೊಂದಿದ್ದಾಳೆ.
ಇನ್‌ಸ್ಟಾಗ್ರಾಂನಲ್ಲೂ ಪೇಜ್ ಒಂದನ್ನು ಹೊಂದಿರುವ ಸಾನಿಯಾಗೆ ಅಲ್ಲೋ ಒಳ್ಳೆಯ ಫಾಲೋಯಿಂಗ್ ಬೆಳೆಯುತ್ತಿದೆ. ಇದುವರೆಗೂ ತನ್ನ ರ‍್ಯಾಪಿಂಗ್ ಪಯಣದಲ್ಲಿ ಕಂಡ ಏಳುಬೀಳುಗಳ ಕುರಿತು ಮಾತನಾಡಿದ ಸಾನಿಯಾ, “ಇಲ್ಲಿನ ಜನರಿಗೆ ರ‍್ಯಾಪ್ ಎಂದರೇನು ಎಂದು ತಿಳಿದಿಲ್ಲ, ಹಾಗಾಗಿ ನಾನು ಅವರಿಗೆ ಅದರ ಬಗ್ಗೆ ಹೇಳಬೇಕಾಗಿ ಬಂದಿದೆ. ರ‍್ಯಾಪ್ ಮಾಡುವುದು ಒಳ್ಳೆಯದು ಹಾಗೂ ಅದನ್ನು ಹೇಗೆ ಮಾಡುತ್ತಾರೆ ಮತ್ತು ನಾನು ಇದನ್ನು ಎಷ್ಟು ಇಷ್ಟ ಪಡುತ್ತೇನೆ ಎಂದು ಅವರಿಗೆ ವಿವರಿಸಬೇಕಾಗಿ ಬಂದಿದೆ.
ನಂತರದ ದಿನಗಳಲ್ಲಿ ನನ್ನ ತಾಯಿಗೂ ಇದು ಇಷ್ಟವಾಗಿದೆ. ಒಮ್ಮೆ ನಾನು ನನ್ನ ಮನೆಯಿಂದ ಹೊರ ಬಂದಾಗ ಜಗತ್ತು ನನ್ನ ಬಗ್ಗೆ ಏನನ್ನುತ್ತದೋ ಎಂಬ ಭಯವಿತ್ತು. ಆದರೆ ನನಗೆ ಈಗ ನನ್ನ ಹೆತ್ತವರು ಹಾಗೂ ಶಿಕ್ಷಕರ ಬೆಂಬಲವಿದೆ. ಆದ್ದರಿಂದ ನಾನು ಮುಂದುವರೆಯುತ್ತೇನೆ,” ಎಂದು ಹೇಳಿದ್ದಾಳೆ.