ರಾಯ್‌ಪುರ: ವಿವಾಹ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಸ್ಮರಣೀಯ ಕ್ಷಣವಾಗಿದೆ. ತಮ್ಮ ಮದುವೆಯ ದಿನವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ವಧು-ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದೆಡೆ ವಧು-ವರ ಉಯ್ಯಾಲೆಯ ಮುಖಾಂತರ ವೇದಿಕೆಗೆ ಎಂಟ್ರಿ ಕೊಟ್ಟಾಗ ಎಡವಟ್ಟಾಗಿರುವ ಘಟನೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಮದುವೆ ಅಂದ್ರೆ ಫ್ಯಾಷನ್ ಆಗಿದೆ. ಸಿರಿವಂತರು ತಮ್ಮ ಅರಶಿನ ಶಾಸ್ತ್ರ, ಸಂಗೀತ, ಮದುವೆ ಕಾರ್ಯಕ್ರಮವನ್ನೆಲ್ಲಾ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ ಕೊಟ್ಟುಬಿಡುತ್ತಾರೆ. ಈವೆಂಟ್ ಕಂಪನಿಯವರು ಏನಾದರೊಂದು ಢಿಫರೆಂಟ್ ಆಗಿ ಮಾಡಬೇಕೆಂದು ಯೋಜಿಸುತ್ತಾರೆ. ಕೆಲವೊಮ್ಮೆ ಇವು ಎಡವಟ್ಟಾಗುತ್ತದೆ.
ಇದೀಗ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ವಿವಾಹವೊಂದರಲ್ಲೂ ಪ್ರಮಾದವಾಗಿದೆ. ವಧು-ವರ ಉಯ್ಯಾಲೆ ಮುಖಾಂತರ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ನೃತ್ಯಗಾರರು ಡ್ಯಾನ್ಸ್ ಮಾಡುತ್ತಾ ನೂತನ ಜೋಡಿಯನ್ನು ಸ್ವಾಗತಿಸಿದ್ದಾರೆ. ಜೊತೆಗೆ ವೇದಿಕೆ ತುಂಬಾ ಪಟಾಕಿಯನ್ನು ಬೆಳಗುವ ಮುಖಾಂತರ ನವಜೋಡಿಗೆ ಭರ್ಜರಿ ಸ್ವಾಗತ ಕೋರಲಾಗಿದೆ.
ಆದರೆ, ದುರಾದೃಷ್ಟವಶಾತ್ ಅಚಾನಕ್ಕಾಗಿ ಉಯ್ಯಾಲೆಯ ಸ್ಟಿಂಗ್ ಕಡಿದ ಪರಿಣಾಮ ವಧು-ವರ 12 ಅಡಿ ಎತ್ತರದಿಂದ ಧೊಪ್ಪನೆ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅಲ್ಲಿ ನೆರೆದಿದ್ದ ಅವರ ಸಂಬಂಧಿಕರು ಜೋರಾಗಿ ಕಿರುಚುತ್ತಾ, ವೇದಿಕೆಯ ಬಳಿ ಓಡಿದ್ದಾರೆ.
ವರದಿಯ ಪ್ರಕಾರ, ವಧು ಮತ್ತು ವರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯು ಘಟನೆಯ ಹೊಣೆಯನ್ನು ಹೊತ್ತುಕೊಂಡು ದಂಪತಿಗಳಿಗೆ ಎಲ್ಲಾ ರೀತಿಯ ಸಹಾಯ ಮಾಡಿದೆ. 30 ನಿಮಿಷಗಳ ನಂತರ ಜೋಡಿಯು ತಮ್ಮ ವಿವಾಹದ ಆಚರಣೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.