ಡ್ಯಾನ್ಸ್ ಬಾರ್ ಒಂದರ ಮೇಲೆ ನಡೆಸಿದ ದಾಳಿಯಲ್ಲಿ 17 ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆಯು ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಮೇಕಪ್ ರೂಮ್ಗೆ ಕನೆಕ್ಟ್ ಆಗಿದ್ದ ಬೇಸ್ಮೆಂಟ್ನಲ್ಲಿರುವ ರಹಸ್ಯಕೋಣೆಯೊಂದರಲ್ಲಿ ಈ ಮಹಿಳೆಯರನ್ನು ಇರಿಸಲಾಗಿತ್ತು. ದಾಳಿ ನಡೆಯುವುದು ಗಮನಕ್ಕೆ ಬರುತ್ತಿದ್ದಂತೆಯೇ ಡ್ಯಾನ್ಸ್ ಬಾರ್ನ ಮಾಲೀಕರು ಸುಧಾರಿತ ಎಲೆಕ್ಟ್ರಾನಿಕ್ ಸಾಧನದಿಂದ ದಾಳಿಯ ಬಗ್ಗೆ ಎಚ್ಚರಿಸಿದ್ದರು ಎನ್ನಲಾಗಿದೆ.
ಅಂಧೇರಿಯಲ್ಲಿರುವ ದೀಪಾ ಬಾರ್ ಮೇಲೆ ಈ ದಾಳಿಯನ್ನು ನಡೆಸಲಾಗಿದೆ. ಗ್ರಾಹಕರ ಎದುರು ಮಹಿಳೆಯರಿಂದ ನೃತ್ಯ ಮಾಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿದ ಪೊಲೀಸರು ಶನಿವಾರ ಈ ದಾಳಿಯನ್ನು ನಡೆಸಿದ್ದಾರೆ. ಆದರೆ ದಾಳಿಯ ಆರಂಭದಲ್ಲಿ ಯಾವುದೂ ಪೊಲೀಸರು ಅಂದುಕೊಂಡಂತೆ ನಡೆಯಲಿಲ್ಲ. ಸ್ನಾನಗೃಹ, ಸ್ಟೋರ್ ರೂಮ್, ಅಡುಗೆ ಮನೆ ಹೀಗೆ ಎಲ್ಲಿ ಹುಡುಕಿದರೂ ಯುವತಿಯರು ಪತ್ತೆಯಾಗಿರಲಿಲ್ಲ.
ಇದಾದ ಬಳಿಕ ಪೊಲೀಸರು ಬಾರ್ ಮ್ಯಾನೇಜರ್, ಕ್ಯಾಶಿಯರ್ ವೇಯ್ಟರ್ ಸೇರಿದಂತೆ ಯಾರನ್ನೇ ವಿಚಾರಣೆಗೆ ಒಳಪಡಿಸಿದರೂ ಒಬ್ಬರೂ ಕೂಡ ಮಾಹಿತಿಯನ್ನು ಬಾಯ್ಬಿಟ್ಟಿರಲಿಲ್ಲ. ಈ ವೇಳೆಯಲ್ಲಿ ಮೇಕಪ್ ರೂಮ್ನಲ್ಲಿದ್ದ ದೊಡ್ಡ ಕನ್ನಡಿಯು ಪೊಲೀಸರ ಕಣ್ಣಿಗೆ ಬಿದ್ದಿದೆ. ಕನ್ನಡಿಯನ್ನು ತೆಗೆಯುವುದು ಕಷ್ಟವಾದ್ದರಿಂದ ಸುತ್ತಿಗೆ ಸಹಾಯದಿಂದ ಕನ್ನಡಿಯನ್ನು ಒಡೆಯಬೇಕಾಯ್ತು. ಈ ವೇಳೆ ರಹಸ್ಯ ಕೋಣೆಯು ಪೊಲೀಸರ ಕಣ್ಣಿಗೆ ಬಿದ್ದಿದೆ. ಬಾರ್ ಮ್ಯಾನೇಜರ್, ಕ್ಯಾಶಿಯರ್ ಸೇರಿದಂತೆ ಅನೇಕರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.