
ಭಾರತದ ಬೆಡಗಿ ಹರ್ನಾಜ್ ಸಂಧು 2021ನೇ ಸಾಲಿನ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಜಾಬ್ ಮೂಲದ ಹರ್ನಾಜ್ ಇಸ್ರೆಲ್ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ 21 ವರ್ಷ ಪ್ರಾಯದ ಚಂಡೀಗಢ ಮೂಲದ ಮಾಡೆಲ್ ವಿಶ್ವ ಸುಂದರಿ ಪಟ್ಟವನ್ನು ತಂದುಕೊಟ್ಟಿದ್ದಾರೆ.
ಅಂತಿಮ ಸುತ್ತಿನಲ್ಲಿ ಪರಗ್ವೆಯ ನಾದಿಯಾ ಫೇರೇರಾ ಹಾಗೂ ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸ್ವಾನೆಯನ್ನು ಹಿಂದಿಕ್ಕಿದ ಹರ್ನಾಜ್ ವಿಶ್ವ ಸುಂದರಿಯಾಗಿ ಹೊರಹೊಮ್ಮಿದರು.
ಅಂತಿಮ ಸುತ್ತಿನಲ್ಲಿದ್ದ ಸ್ಪರ್ಧಿಗಳಿಗೆ ‘ಇಂದಿನ ಒತ್ತಡಗಳನ್ನು ಹೇಗೆ ಎದುರಿಸಬೇಕು ಎಂದು ಯೋಚಿಸುತ್ತಿರುವ ಯುವತಿಯರಿಗೆ ನೀವು ಏನು ಸಲಹೆ ನೀಡುತ್ತೀರಿ..?’ ಎಂದು ಪ್ರಶ್ನಿಸಲಾಗಿತ್ತು.
ಈ ಪ್ರಶ್ನೆಗೆ ಹರ್ನಾಜ್ ಬಹಳ ಸ್ಪೂರ್ತಿದಾಯಕ ಉತ್ತರವನ್ನು ನೀಡಿದರು. ಇಂದಿನ ಯುಗದಲ್ಲಿ ಯುವ ಜನತೆ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ತಮ್ಮ ಮೇಲೆ ತಾವು ನಂಬಿಕೆ ಇಡದೇ ಇರುವುದು. ನೀವು ಉತ್ತಮರೆಂದು ಭಾವಿಸಿಕೊಳ್ಳಬೇಕು ಎಂದರೆ ಮೊದಲು ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಿ. ಪ್ರಪಂಚದಲ್ಲಿ ನಡೆಯುತ್ತಿರುವ ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡೋಣ. ಅದನ್ನೇ ನೀವು ಅರ್ಥ ಮಾಡಿಕೊಳ್ಳಬೇಕು. ಇವೆಲ್ಲದರಿಂದ ಹೊರಗೆ ಬನ್ನಿ, ನಿಮ್ಮ ಬಗ್ಗೆ ನೀವು ಮಾತನಾಡಿ, ಏಕೆಂದರೆ ನಿಮ್ಮ ಜೀವನಕ್ಕೆ ನೀವೇ ನಾಯಕ. ನಿಮಗೆ ನೀವೇ ಧ್ವನಿ. ನನ್ನ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ. ಇದೇ ಕಾರಣಕ್ಕೆ ಇಂದು ನಾನು ನಿಮ್ಮೆಲ್ಲರ ಮುಂದೆ ನಿಂತಿದ್ದೇನೆ . ಧನ್ಯವಾದ ಎಂದು ಹೇಳಿದ್ರು.