ಕೊರೊನಾದಿಂದಾಗಿ ವಿಶ್ವಾದ್ಯಂತ ಸದ್ಯ ವರ್ಕ್ ಫ್ರಮ್ ಹೋಮ್ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಅನೇಕರಿಗೆ ಮನೆಯೇ ಕಚೇರಿ ಎಂಬಂತಾಗಿದೆ.
ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ತನ್ನ ಬೆಡ್ರೂಮ್ನಿಂದ ಕಚೇರಿ ಕೆಲಸ ಮಾಡುವ ಕೋಣೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಜಾರಿ ಬಿದ್ದಿದ್ದಾನೆ. ಇದನ್ನು ಜರ್ಮನಿಯ ನ್ಯಾಯಾಲಯವೊಂದು ಕಚೇರಿಯಲ್ಲಿ ನಡೆದ ಅಪಘಾತವೆಂದು ಆದೇಶ ನೀಡಿದೆ.
ಜರ್ಮನಿಯ ಅನಾಮಧೇಯ ವ್ಯಕ್ತಿಯೊಬ್ಬ ತನ್ನ ಮಲಗುವ ಕೋಣೆಯಿಂದ ಕೆಲಸ ಮಾಡುವ ಕೋಣೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿದ್ದ ಪರಿಣಾಮ ಆತನ ಬೆನ್ನಿಗೆ ಏಟಾಗಿತ್ತು. ಆದರೆ ಕಚೇರಿಯ ಆಡಳಿತ ಮಂಡಳಿಯು ಇದು ಮನೆಯಲ್ಲಿ ನಡೆದ ಅಪಘಾತವಾದ್ದರಿಂದ ಈತನಿಗೆ ವಿಮಾ ಸೌಲಭ್ಯವನ್ನು ನೀಡಲು ನಿರಾಕರಿಸಿತ್ತು. ಕೆಳಹಂತದ ಎರಡು ನ್ಯಾಯಾಲಯಗಳು ಸಹ ಕಚೇರಿಯ ವಾದವನ್ನೇ ಪುರಸ್ಕರಿಸಿದ್ದವು.
ಆದರೆ ಕ್ಯಾಸೆಲ್ನಲ್ಲಿರುವ ಮೇಲು ಹಂತದ ನ್ಯಾಯಾಲಯವು ಈ ವ್ಯಕ್ತಿಯು ವಿಮಾ ಸೌಲಭ್ಯ ಪಡೆಯಲು ಅರ್ಹರಿದ್ದಾನೆ ಎಂದು ತೀರ್ಪು ನೀಡಿದೆ. ಮನೆಯ ಕೋಣೆಯಿಂದ ಕಚೇರಿಯ ಕೆಲಸ ಮಾಡುವ ಕೋಣೆಗೆ ತೆರಳುವುದೂ ಸಹ ಒಂದು ಪ್ರಯಾಣದ ಮಾರ್ಗವೇ ಆಗಿದೆ. ಹೀಗಾಗಿ ಕಚೇರಿ ಕೆಲಸದ ಕಡೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಉಂಟಾದ ಅಪಘಾತವಿದಾಗಿದ್ದು ಉದ್ಯೋಗಿಯು ಎಲ್ಲಾ ರೀತಿಯಿಂದ ವಿಮೆಗೆ ಅರ್ಹರಾಗಿದ್ದಾರೆ ಎಂದು ಹೇಳಿದೆ.