ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಮನೆ ಖರೀದಿಸಲು ಗೃಹ ಸಾಲ ನೆರವಾಗುತ್ತದೆ. ಆದರೆ ಜನಸಾಮಾನ್ಯರು ಮಾಡುವ ಕೆಲವು ತಪ್ಪುಗಳಿಂದಾಗಿ ಗೃಹ ಸಾಲ ಸಿಗುವುದಿಲ್ಲ ಬ್ಯಾಂಕ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು, ಸಾಲ ನೀಡುವ ಮೊದಲು ಅರ್ಜಿದಾರನ ವೃತ್ತಿ, ಅರ್ಹತೆ, ಅನುಭವ, ಕುಟುಂಬ ಸೇರಿದಂತೆ ಅನೇಕ ಮಾಹಿತಿಯನ್ನು ಪಡೆಯುತ್ತದೆ. ಎಲ್ಲ ಮಾಹಿತಿ ಪರಿಶೀಲನೆ ನಂತ್ರ ಯೋಗ್ಯವೆನಿಸಿದರೆ ಮಾತ್ರ ಸಾಲ ನೀಡುತ್ತದೆ.
ಮನೆ ಖರೀದಿ ಮಾಡಬೇಕೆಂದರೆ ಬ್ಯಾಂಕ್ ಸಾಲ ಮಾತ್ರ ನಂಬಿದರೆ ಸಾಕಾಗುವುದಿಲ್ಲ. ಬ್ಯಾಂಕ್, ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇಕಡಾ 80ರಷ್ಟು ಮಾತ್ರ ಸಾಲ ನೀಡುತ್ತದೆ. ಉಳಿದ ಹಣವನ್ನು ಡೌನ್ ಪೇಮೆಂಟ್ ಮಾಡಲು ನೀವೇ ನೀಡಬೇಕಾಗುತ್ತದೆ. ಹಾಗಾಗಿ ಆ ಹಣವನ್ನು ನೀವು ಹೊಂದಿಸಿಕೊಳ್ಳಬೇಕು.
ಕೆಲವು ಸಂದರ್ಭಗಳಲ್ಲಿ, ಆಸ್ತಿ ಅಥವಾ ಕಾರಿನ ಗ್ಯಾರಂಟಿ ಕೇಳಬಹುದು. ಸಾಲವನ್ನು ಮರುಪಾವತಿ ಮಾಡದಿದ್ದರೆ, ಸಾಲದಾತನು ಆಸ್ತಿ ಅಥವಾ ಕಾರನ್ನು ಸ್ವಾಧೀನಪಡಿಸಿಕೊಳ್ಳಬಹುದು. ಹಾಗಾಗಿ ಸಾಲಕ್ಕಾಗಿ ಬ್ಯಾಂಕ್‌ಗೆ ಯಾವುದೇ ತಪ್ಪು ಮಾಹಿತಿ ನೀಡಬಾರದು.
ಸಾಲಗಾರನ ಹೆಸರಿನಲ್ಲಿ ಹೆಚ್ಚು ಸಾಲದ ಖಾತೆಗಳಿದ್ದರೆ ಗೃಹ ಸಾಲಕ್ಕೆ ಅನುಮೋದನೆ ಸಿಗುವುದು ಕಡಿಮೆ. ಹಾಗಾಗಿ ಹೆಚ್ಚೆಚ್ಚು ಸಾಲದ ಖಾತೆಗಳನ್ನು ಹೊಂದಿರಬೇಡಿ.
ಕ್ರೆಡಿಟ್ ಕಾರ್ಡ್ ಸೇರಿದಂತೆ ನಿಮ್ಮ ಸಾಲದ ಮರುಪಾವತಿ ಇತಿಹಾಸ ಕೂಡ ಸಾಲ ಪಡೆಯುವ ವೇಳೆ ಮಹತ್ವ ಪಡೆಯುತ್ತದೆ. ಸರಿಯಾಗಿ ಸಾಲ ತೀರಿಸದೆ ಹೋದಲ್ಲಿ ಅಥವಾ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ನಿಮಗೆ ಸಾಲ ಸಿಗುವುದಿಲ್ಲ.
ಗೃಹ ಸಾಲ, ಆದಾಯವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಆದಾಯ ಹೊಂದಿದ್ದರೆ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಯು ಗೃಹ ಸಾಲವಾಗಿ ನೀಡುತ್ತದೆ.
ಉಳಿತಾಯ ಮತ್ತು ನಿವೃತ್ತಿ ಖಾತೆಗಳನ್ನು ಪರಿಶೀಲಿಸಲು ಬ್ಯಾಂಕ್ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಕೇಳಬಹುದು. ಮನೆ ಖರೀದಿಗೂ ಮೊದಲು ನೀವು ಬಾಡಿಗೆದಾರರಾಗಿದ್ದರೆ, ಬ್ಯಾಂಕ್, ಮನೆ ಮಾಲೀಕರನ್ನು ಸಂಪರ್ಕಿಸಿ, ನೀವು ಮನೆ ಬಾಡಿಗೆ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆಯಬಹುದು. ಗೃಹ ಸಾಲ ನೀಡುವ ಮೊದಲು ನಿಮ್ಮ ವಯಸ್ಸು ಕೂಡ ಮಹತ್ವ ಪಡೆಯುತ್ತದೆ.
ನಿಮ್ಮನ್ನು ಅವಲಂಭಿಸಿರುವವರ ಬಗ್ಗೆಯೂ ಬ್ಯಾಂಕ್ ಮಾಹಿತಿ ಪಡೆಯುತ್ತದೆ. ಅವಲಂಭಿತರಿದ್ದರೆ, ಬಂದ ಆದಾಯದಲ್ಲಿ ಸಾಲ ತೀರಿಸಲು ನಿಮಗೆ ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಸಂಬಳ ಪಡೆಯುತ್ತಿದ್ದರೆ, ಹೋಮ್ ಲೋನ್ ಪಡೆಯಲು ಕನಿಷ್ಠ ಮೂರು ವರ್ಷಗಳ ಅನುಭವದ ಅಗತ್ಯವಿದೆ. ವ್ಯಾಪಾರ ಮಾಡುತ್ತಿದ್ದರೆ, ಕಂಪನಿ ಅಥವಾ ಘಟಕವು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಲಾಭ ಪಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.