ಉತ್ತರ ಪ್ರದೇಶದ ಬರೇಲಿಯಲ್ಲಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಹಿಮಾಂಶು ಗುಪ್ತಾ ಇಂದು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ, ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ ಅಭ್ಯರ್ಥಿಗೂ ದೊಡ್ಡ ಸ್ಪೂರ್ತಿಯಾಗಿದ್ದಾರೆ.
ಮೂರು ಬಾರಿ ಪರೀಕ್ಷೆ ತೆಗೆದುಕೊಂಡ ಹಿಮಾಂಶು, ಮೊದಲೆರಡು ಬಾರಿ ಕ್ಲಿಯರ್ ಮಾಡಲು ವಿಫಲರಾಗಿದ್ದರು. ಆದರೂ ಸಹ ಭರವಸೆ ಕಳೆದುಕೊಳ್ಳದ ಹಿಮಾಂಶು, 2019ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 304ನೇ ರ‍್ಯಾಂಕ್ ಪಡೆದಿದ್ದಾರೆ.
ದಿನಗೂಲಿ ನೌಕರರಾಗಿದ್ದ ಹಿಮಾಂಶು ತಂದೆ ಪುಟ್ಟದೊಂದು ಚಹಾ ಅಂಗಡಿ ತೆರೆದು ತಮ್ಮ ಕುಟುಂಬಕ್ಕೆ ಆಧಾರವಾಗಿದ್ದರು. ಅಪ್ಪನ ಚಹಾದಂಗಡಿಯಲ್ಲಿ ವ್ಯಾಪಾರ ನೋಡಿಕೊಳ್ಳುತ್ತಾ ಪ್ರತಿನಿತ್ಯ ಸುದ್ದಿಪತ್ರಿಕೆಗಳನ್ನು ಓದುತ್ತಿದ್ದ ಹಿಮಾಂಶು ಸ್ವಂತ ಅಧ್ಯಯನ ಹಾಗೂ ಪರಿಶ್ರಮದಿಂದ, ಡಿಜಿಟಲ್ ನೋಟ್ಸ್ ಹಾಗೂ ವಿಡಿಯೋಗಳ ಮೂಲಕ ಯುಪಿಎಸ್‌ಸಿ ಪರೀಕ್ಷೆಗೆ ಸಜ್ಜಾಗಲು ಆರಂಭಿಸಿದರು.
ದೆಹಲಿ ವಿವಿಯ ಹಿಂದೂ ಕಾಲೇಜಿನಲ್ಲಿ ಪದವಿ ಪೂರೈಸಿರುವ ಹಿಮಾಂಶು, ಅದೇ ಮೊದಲ ಬಾರಿಗೆ ಮೆಟ್ರೋ ನಗರವೊಂದಕ್ಕೆ ಭೇಟಿ ನೀಡಿದ್ದಾಗಿ ಹೇಳಿದ್ದಾರೆ.
ತಮ್ಮ ಕುಟುಂಬಕ್ಕೆ ನೆರವಾಗಲೆಂದು ಸರ್ಕಾರಿ ಕಾಲೇಜೊಂದರಲ್ಲಿ ಸಂಶೋಧನಾ ಸ್ಕಾಲರ್ ಆಗಿ ಸೇರಿದ್ದ ಹಿಮಾಂಶು, ಈ ಮೂಲಕ ಸ್ಟೈಪಂಡ್ ಪಡೆಯುವುದಲ್ಲದೇ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಜ್ಜಾಗಲು ಸೂಕ್ತವಾದ ವಾತಾವರಣ ಸಿಗುತ್ತದೆ ಎಂದರಿತಿದ್ದರು.
ತಮ್ಮ ಮೊದಲ ಯತ್ನದಲ್ಲಿ, ರ‍್ಯಾಂಕಿಂಗ್ ಸ್ವಲ್ಪ ಕಡಿಮೆ ಇದ್ದ ಕಾರಣ ಭಾರತೀಯ ರೈಲ್ವೇ ಸೇವೆಗೆ ನೇಮಕವಾದರೂ ಸಹ ಐಎಎಸ್ ಹುದ್ದೆಯೇ ಬೇಕೆಂದು ಮತ್ತೊಮ್ಮೆ ಯತ್ನಿಸಿದ ಹಿಮಾಂಶು, ಕೊನೆಗೂ 304ನೇ ರ‍್ಯಾಂಕ್ ಪಡೆದು ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.